ಬಿಎಸ್‌ವೈ-ಈಶ್ವರಪ್ಪ ನಡುವಿನ ವೈಮನಸ್ಸಿಗೆ ವರಿಷ್ಟರಿಂದ ಶೀಘ್ರವೇ ಮದ್ದು: ಸದಾನಂದಗೌಡ

ಬೆಂಗಳೂರು, ಜ. 20: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ನಡುವಿನ ಗುದ್ದಾಟದ ಬಗ್ಗೆ ವರಿಷ್ಟರ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೆ ಉಭಯ ನಾಯಕರ ಮಧ್ಯೆದ ಸಮಸ್ಯೆಗೆ ವರಿಷ್ಟರು ಪರಿಹರಿಸಲಿದ್ದಾರೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಇಲ್ಲಿನ ಹೆಬ್ಬಾಳದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರಕಾರ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ನಿರೀಕ್ಷೆ ಮೀರಿ ಕೆಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಬಗ್ಗೆ ನಾವು ಕಣ್ಣು ಮುಚ್ಚಿ ಕೂರುವುದಿಲ್ಲ ಎಂದರು.
ಕಲಬುರ್ಗಿಯಲ್ಲಿ ನಾಳೆಯಿಂದ ಆರಂಭಗೊಳ್ಳಲಿರುವ ರಾಜ್ಯ ಕಾರ್ಯಕಾರಣಿಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಬಿಎಸ್‌ವೈ ಹಾಗೂ ಈಶ್ವರಪ್ಪ ಇಬ್ಬರು ದೊಡ್ಡ ನಾಯಕರು. ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಮಾತುಕತೆ: ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುವ ವಿಚಾರ ಗೊತ್ತಿಲ್ಲ. ಈ ಬಗ್ಗೆ ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇನೆ. ಈ ಸಂಬಂಧ ಅವರೊಂದಿಗೆ ಸಮಾಲೋಚನೆ ನಡೆಸುವೆ. ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡರೆ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.
ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟಕ್ಕೆ ಬೆಳೆದಿವೆ. ಹೀಗಾಗಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಜನಪ್ರತಿನಿಧಿಗಳು ಖಾಸಗಿ ಶಾಲೆಗಳನ್ನು ಹೊಂದುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಓಟ್ ಬ್ಯಾಂಕ್ ಕಾರಣಕ್ಕಾಗಿ ಪಠ್ಯ-ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಕ್ರಮ ಸರಿಯಲ್ಲ’
-ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ







