ಮಂಗಳೂರು : ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ‘ಕನಕ ತತ್ತ್ವ ಚಿಂತನ’ ಪ್ರಚಾರೋಪನ್ಯಾಸ

ಮಂಗಳೂರು, ಜ.20: ಮಧ್ಯಕಾಲದ ಭಕ್ತಿ ಪರಂಪರೆ ಬಹುಧಾರೆಗಳನ್ನು ಒಳಗೊಂಡ ಪರಂಪರೆಯಾಗಿದ್ದು, ಆಧುನಿಕ ಕಾಲದ ಪಂಥೀಯತೆ ಹಾಗೂ ಧಾರ್ಮಿಕ ಸಂಕುಚಿತತೆಯನ್ನೂ ಮೀರಿರುವುದಾಗಿದೆ ಎಂದು ಮಂಗಳೂರು ವಿವಿಯ ಉಪನ್ಯಾಸಕ ಡಾ.ರಾಜಾರಾಮ ತೋಳ್ಪಾಡಿ ಹೇಳಿದರು.
ಅವರು ಕನಕದಾಸ ಸಂಶೋಧನಾ ಕೇಂದ್ರ ಮತ್ತು ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದೊಂದಿಗೆ ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆದ ‘ಕನಕ ತತ್ತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆಯ ‘ಭಕ್ತಿ ಪರಂಪರೆಗಳು: ಹಲವು ಪ್ರತಿಫಲನಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಯುರೋಪಿನ ಚರಿತ್ರಾ ಶಾಸ್ತ್ರದ ಕಲ್ಪನೆಯಂತೆ ಭಾರತದ ಮಧ್ಯಯುಗವನ್ನು ಕತ್ತಲೆಯ ಯುಗವೆಂದು ಪ್ರತಿಪಾದಿಸಲ್ಪಟ್ಟಿದೆ. ಆದರೆ ಭಾರತದ ಮಧ್ಯಯುಗದಲ್ಲಿ ಅನೇಕ ಸೃಜನಶೀಲ ಚಟುವಟಿಕೆಗಳು, ಸಾಮಾಜಿಕ ಪರಿವರ್ತನೆಗೆ ಸಂಬಂಧಿಸಿದಂತೆ ಅನೇಕ ಕ್ರಿಯಾಶೀಲ ಚಟುವಟಿಕೆಗಳು ನಡೆದಿರುವುದರಿಂದ ಅದು ಬೆಳಕಿನ ಕಾಲ. ಈ ಹಿನ್ನೆಲೆಯಲ್ಲಿ ಮಧ್ಯಕಾಲದ ಭಕ್ತಿ ಪರಂಪರೆ ಅದರಲ್ಲೂ ಕನಕದಾಸರ ಚಿಂತನೆಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಬಿ.ಶಿವರಾಮ ಶೆಟ್ಟಿ ಅವರು, ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯು ಕೇವಲ ಪದವಿ ಮತ್ತು ಉದ್ಯೋಗದ ದೃಷ್ಟಿಯಿಂದ ಕೂಡಿದ್ದು, ಸಮಾಜ ಸಂಸ್ಕೃತಿಯ ಸ್ವರೂಪದ ಬಗ್ಗೆ ಚಿಂತನೆ ನಡೆಸುವ ಅವಕಾಶಗಳನ್ನು ಒದಗಿಸುವುದಿಲ್ಲ. ಈ ನೆಲೆಯಲ್ಲಿ ನಮ್ಮ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಪುರಷರ ಚಿಂತನೆಗಳ ಕುರಿತು ಅಧ್ಯಯನ ನಡೆಸುವ ವಿಶ್ವವಿದ್ಯಾನಿಲಯದದಲ್ಲಿರುವ ಅಧ್ಯಯನ ಪೀಠಗಳು ಈ ಬಗೆಯಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತವೆ. ಮಧ್ಯಕಾಲದ ಭಕ್ತಿಪರಂಪರೆ ಸಾಂಸ್ಕೃತಿ ಸಾಮಾಜಿಕ ಮೂಲಗಳನ್ನು ಮರೆತು ಜನರನ್ನು ಒಗ್ಗೂಡಿಸುವ ಆಶಯವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ವಹಿಸಿದ್ದರು.
ದೇವಾನಂದ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೀನಾಕ್ಷಿ ಸ್ವಾಗತಿಸಿದರು.
ಉಪನ್ಯಾಸಕ ರವಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ವಿದ್ಯಾರ್ಥಿನಿಯರು ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.







