ಅಮೆರಿಕದ ನೂತನ ಪ್ರಥಮ ಕುಟುಂಬ ಯಾರು ? ಟ್ರಂಪ್ ಆಡಳಿತದಲ್ಲಿ ಅವರ ಪಾತ್ರವೇನು ?

ವಾಶಿಂಗ್ಟನ್, ಜ. 20: ಅಮೆರಿಕದ 45ನೆ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸುವ ಡೊನಾಲ್ಡ್ ಟ್ರಂಪ್‌ರ ಕುಟುಂಬ ಸದಸ್ಯರು ನೂತನ ಸರಕಾರದಲ್ಲಿ ವಹಿಸಬಹುದಾದ ಪಾತ್ರಗಳ ಬಗ್ಗೆ ಕಿರು ವಿವರಗಳನ್ನು ಇಲ್ಲಿ ನೀಡಲಾಗಿದೆ.
ಮೆಲಾನಿಯಾ ಟ್ರಂಪ್ (46 ವರ್ಷ): ಮೂಲತಃ ಸ್ಲೊವೇನಿಯ ದೇಶದವರಾದ ಮೆಲಾನಿಯಾ ಡೊನಾಲ್ಡ್ ಟ್ರಂಪ್‌ರ ಮೂರನೆ ಪತ್ನಿ. ಮಾಜಿ ರೂಪದರ್ಶಿ. ದಂಪತಿ 2005ರಲ್ಲಿ ಮದುವೆಯಾದರು. ಅವರ ಮೊದಲ ಮಗ ಬರಾನ್ 2006ರಲ್ಲಿ ಜನಿಸಿದರು.
ಅವರು ವಾಶಿಂಗ್ಟನ್ ಡಿಸಿಗೆ ಹೋಗುವ ಬದಲು ಮಗ ಬರಾನ್‌ನೊಂದಿಗೆ ಶಾಲಾ ವರ್ಷ ಮುಗಿಯುವ ತನಕ ನ್ಯೂಯಾರ್ಕ್‌ನಲ್ಲೇ ಉಳಿಯುತ್ತಾರೆ. ಟ್ರಂಪ್ ಆಡಳಿತದಲ್ಲಿ ಅವರು ಹೆಚ್ಚಿನ ಪಾತ್ರವನ್ನು ವಹಿಸುವುದಿಲ್ಲ ಎಂದು ಭಾವಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಜೂನಿಯರ್ (39 ವರ್ಷ): ಡೊನಾಲ್ಡ್ ಟ್ರಂಪ್ ಜೂನಿಯರ್ ಅಮೆರಿಕದ ನೂತನ ಅಧ್ಯಕ್ಷರು ತನ್ನ ಮೊದಲ ಪತ್ನಿ, ಝೆಕ್ ರೂಪದರ್ಶಿ ಇವಾನಾ ಟ್ರಂಪ್‌ರಿಂದ ಪಡೆದ ಹಿರಿಯ ಮಗ. ಈಗ ಅವರು ತನ್ನ ಸಹೋದರ ಎರಿಕ್ ಜೊತೆಗೆ ಟ್ರಂಪ್ ಆರ್ಗನೈಸೇಶನ್‌ನ ಟ್ರಸ್ಟೀಯಾಗಿ ಕೆಲಸ ಮಾಡುತ್ತಿದ್ದಾರೆ.
ಟ್ರಂಪ್ ಜೂನಿಯರ್ ತನ್ನ ತಂದೆಯ ಸರಕಾರದಲ್ಲಿ ಯಾವುದೇ ಪಾತ್ರ ವಹಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಬಿಳಿಯ ರಾಷ್ಟ್ರೀಯವಾದಿಯೊಬ್ಬನಿಗೆ ಸಂದರ್ಶನ ನೀಡಲು ಒಪ್ಪಿಕೊಳ್ಳುವ ಮೂಲಕ ಹಾಗೂ ಸಿರಿಯ ನಿರಾಶ್ರಿತರನ್ನು ‘ಸ್ಕಿಟಲ್ಸ್’ ಕ್ಯಾಂಡಿಗೆ ಹೋಲಿಸುವ ಮೂಲಕ ಚುನಾವಣಾ ಪ್ರಚಾರ ಕಾಲದಲ್ಲಿ ಅವರು ವಿವಾದಕ್ಕೆ ಗುರಿಯಾಗಿದ್ದರು ಎಂದು ‘ದ ಗಾರ್ಡಿಯನ್’ ವರದಿ ಮಾಡಿದೆ.
ಅವರು 2005ರಲ್ಲಿ ರೂಪದರ್ಶಿ ವನೆಸ್ಸಾ ಕೇ ಹೇಡನ್ ಅವರನ್ನು ಮದುವೆಯಾಗಿದ್ದಾರೆ. ದಂಪತಿಗೆ ಐದು ಮಕ್ಕಳಿವೆ.
ಇವಾಂಕಾ ಟ್ರಂಪ್ (35): ಟ್ರಂಪ್ ಮತ್ತು ಇವಾನಾ ದಂಪತಿಯ ಹಿರಿಯ ಪುತ್ರಿ. ಫ್ಯಾಶನ್ ಎಕ್ಸೆಕ್ಯೂಟಿವ್ ಆಗಿರುವ ಅವರು ವಾಶಿಂಗ್ಟನ್ ಡಿಸಿಯಲ್ಲಿರುವ ‘ಓಲ್ಡ್ ಪೋಸ್ಟ್ ಆಫಿಸ್’ ಕಟ್ಟಡದಲ್ಲಿ ಇತ್ತೀಚೆಗೆ ಆರಂಭವಾಗಿರುವ ಟ್ರಂಪ್ ಹೊಟೇಲನ್ನು ನೋಡಿಕೊಳ್ಳುತ್ತಿದ್ದಾರೆ.
ಇವಾಂಕಾ ಉದ್ಯಮಿ ಜೇರ್ಡ್ ಕಶ್ನರ್‌ರನ್ನು ಮದುವೆಯಾಗಿದ್ದಾರೆ. ಅವರಿಗೆ ಮೂರು ಮಕ್ಕಳಿವೆ. ತುಂಬು ಗರ್ಭಿಣಿಯಾಗಿದ್ದ ಅವಧಿಯಲ್ಲೂ, ತನ್ನ ತಂದೆಯ ಎರಡು ವರ್ಷದ ಪ್ರಚಾರ ಅವಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಬಿಳಿಯ ಮಹಿಳಾ ಮತದಾರರು ತನ್ನ ತಂದೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಎರಿಕ್ ಟ್ರಂಪ್ (33): ಇವಾನಾ ಮತ್ತು ಟ್ರಂಪ್ ದಂಪತಿಯ ಕಿರಿಯ ಮಗ. ಅವರು ತನ್ನ ಸಹೋದರನೊಂದಿಗೆ ಸೇರಿದ ಮುಂದಿನ ನಾಲ್ಕು ವರ್ಷಗಳಲ್ಲಿ ಕುಟುಂಬದ ಉದ್ಯಮವನ್ನು ನಡೆಸಿಕೊಂಡು ಹೋಗಲಿದ್ದಾರೆ.
ಅವರು 2014ರಲ್ಲಿ ಲಾರಾ ಯುನಾಸ್ಕರನ್ನು ಮದುವೆಯಾದರು. ಅವರಿಗೆ ಮಕ್ಕಳಿಲ್ಲ.
ಜೇರ್ಡ್ ಕಶ್ನರ್ (36): ಇವಾಂಕಾ ಟ್ರಂಪ್‌ರ ಗಂಡ. ನ್ಯೂಜರ್ಸಿಯಲ್ಲಿ ಬೆಳೆದವರು. ನಾಝಿ ಹಿಂಸಾಚಾರದಿಂದ ಬದುಕುಳಿದವರ ಮೊಮ್ಮಗ.
ಸಾಕ್ಷ ನಾಶ ಮತ್ತು ತೆರಿಗೆ ಕಳ್ಳತನ ಪ್ರಕರಣಗಳಲ್ಲಿ ಅವರ ತಂದೆ ಜೈಲಿಗೆ ಹೋದ ಬಳಿಕ, ಕುಟುಂಬದ ಉದ್ಯಮವನ್ನು ವಹಿಸಿಕೊಂಡರು.
ಅವರು ಶ್ವೇತಭವನದಲ್ಲಿ ಅಧ್ಯಕ್ಷರಡು ಹಿರಿಯ ಸಲಹಾಕಾರನ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.
ಟಿಫಾನಿ ಟ್ರಂಪ್ (23): ಟಿಫಾನಿ ಟ್ರಂಪ್ ಡೊನಾಲ್ಡ್ ಟ್ರಂಪ್‌ಗೆ ಎರಡನೆ ಹೆಂಡತಿ ಹಾಗೂ ನಟಿ, ಟಿವಿ ನಿರೂಪಕಿ ಮಾರ್ಲಾ ಮ್ಯಾಪಲ್ಸ್‌ರಿಂದ ಜನಿಸಿದರು. ಇತ್ತೀಚೆಗೆ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅವರು, ತನ್ನ ತಂದೆಯ ಆಡಳಿತದಲ್ಲಿ ಯಾವುದೇ ಪಾತ್ರವನ್ನು ವಹಿಸುವ ಸಾಧ್ಯತೆಯಿಲ್ಲ.







