ಸಂತೋಷ್ ನಾಯಕ್ ಕೊಲೆ: ಮತ್ತೋರ್ವನ ಸೆರೆ

ಉಡುಪಿ, ಜ.20: ಹಿರಿಯಡ್ಕ ಸಣ್ಣಕ್ಕಿಬೆಟ್ಟು ಸಂತೋಷ ನಾಯಕ್ ಕೊಲೆ ಪ್ರಕರಣದ ಇನ್ನೋರ್ವ ಆರೋಪಿಯನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿದೆ.
ಬಂಧಿತನನ್ನು ಮಂಗಳೂರು ಅತ್ತಾವರ ಗ್ರಾಮದ ರಾಜೇಶ್ ಆಚಾರ್ಯ (36) ಎಂದು ಗುರುತಿಸಲಾಗಿದೆ.
ಹಣದ ವಿಚಾರಕ್ಕೆ ಸಂಬಂಧಿಸಿ ಸಂತೋಷ್ ನಾಯಕ್‌ನನ್ನು ಡಿ.2ರಂದು ಅಪಹರಿಸಿದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ತಂಡ ಪೆರ್ಣಂಕಿಲ ಬಳಿ ಕಾಡಿನಲ್ಲಿ ಕೊಲೆ ಮಾಡಿ, ನಂತರ ಅದೇ ದಿನ ರಾತ್ರಿ ಸಂತೋಷ ನಾಯಕ್ ಮನೆಗೆ ಬಂದು ಮನೆಯವರನ್ನು ಹೆದರಿಸಿ ಮನೆಯ ಕಪಾಟನ್ನು ಒಡೆದು ಹಣಕ್ಕಾಗಿ ಹುಡುಕಾಟ ನಡೆಸಿತ್ತು.
ನಂತರ ದೇವರ ಗುಡಿಯ ನೆಲ ಅಗೆದು ಅಲ್ಲಿ ಕೂಡಾ ಹಣಕ್ಕಾಗಿ ಹುಡು ಕಾಡಿ ಹಣ ಸಿಗದೆ ಇದ್ದಾಗ, ಇವರೆಲ್ಲ ಸಂತೋಷ ನಾಯಕ್‌ನ ಹೆಂಡತಿ, ಮಕ್ಕಳು, ತಮ್ಮ, ತಮ್ಮನ ಹೆಂಡತಿ ಮತ್ತು ತಾಯಿಯನ್ನು ಅಪಹರಿಸಿ ಕಾರಿನಲ್ಲಿ ಕರೆದು ಕೊಂಡು ಹೋಗಿ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ರಾಜೇಶ್ ಆಚಾರ್ಯನನ್ನು ಇಂದು ಬಂಧಿಸಲಾಗಿದೆ.
ಈತನಿಂದ ದರೋಡೆ ಮಾಡಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಬೆಂಡೋಲೆ ಹಾಗೂ ಜುಮಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 80,500ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಯನ್ನು ಸೊತ್ತುಗಳೊಂದಿಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಎಎಸ್ಸೈ ರೊಸಾರಿಯೋ ಡಿಸೋಜ, ಸಿಬ್ಬಂದಿಗಳಾದ ರವಿಚಂದ್ರ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜುಕುಮಾರ್, ದಯಾನಂದ ಪ್ರಭು, ಶಿವಾನಂದ ಮತ್ತು ಚಾಲಕ ರಾಘವೇಂದ್ರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







