ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟ : ಬಂಟ್ವಾಳದ ಸಿಬ್ಬಂದಿ ವನಿತಾ ಸಾಧನೆ

ಬಂಟ್ವಾಳ, ಜ. 20: ನಗರ ಪೊಲೀಸ್ ಠಾಣೆಗೆ ಆರು ತಿಂಗಳ ಹಿಂದೆಯಷ್ಟೇ ಪೊಲೀಸ್ ಸಿಬ್ಬಂದಿಯಾಗಿ ನೇಮಕಗೊಂಡ ವನಿತಾ ಎಂಬವರು ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 100 ಮತ್ತು 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇವರು 200 ಮೀ. ಓಟ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗೆದ್ದು ಚಾಂಪಿಯನ್‌ಶಿಪ್ ಮೂಲಕ ಗಮನ ಸೆಳೆದಿದ್ದರು.
ಇದೀಗ ತನ್ನ ಪೊಲೀಸ್ ವೃತ್ತಿ ಜೀವನದ ಆರಂಭದಲ್ಲೇ ಕ್ರೀಡಾ ಕ್ಷೇತ್ರದ ಸಾಧನೆ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಬಂಟ್ವಾಳ ನಗರ ಠಾಣೆಗೆ ಕೀರ್ತಿ ತಂದ ಇವರಿಗೆ ಜಿಲ್ಲಾ ಪೊಲೀಸ್ ಎಸ್ಪಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಸಿಐ ಮಂಜಯ್ಯ, ಎಸ್ಸೈಗಳಾದ ನಂದಕುಮಾರ್, ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.





