‘ಶರಿಯತ್ ಕೌನ್ಸಿಲ್’ನ ನ್ಯಾಯನಿರ್ಣಯ ಕಲಾಪ ಪುರಸ್ಕರಿಸಲಾರೆ: ತ.ನಾ.ಹೈಕೋರ್ಟ್

ಚೆನ್ನೈ,ಜ.20: ಇಲ್ಲಿನ ‘ಮಕ್ಕಾ ಮಸ್ಜಿದ್ ಶರಿಯತ್ ಕೌನ್ಸಿಲ್’ ನ್ಯಾಯಾಂಗ ವೇದಿಕೆಯ ಸ್ವರೂಪದಲ್ಲಿ ಕಾರ್ಯನಿರ್ವಹಿಸುವುದನ್ನು ತಾನು ಪುರಸ್ಕರಿಸುವುದಿಲ್ಲವೆಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ತಮಿಳುನಾಡಿನಲ್ಲಿ ‘ಮಕ್ಕಾ ಮಸ್ಜೀದ್ ಶರಿಯತ್ ಕೌನ್ಸಿಲ್ ಹಾಗೂ ಅದೇ ರೀತಿಯ ಇತರ ಕೆಲವು ಸಂಘಟನೆಗಳು, ನ್ಯಾಯ ನಿರ್ಣಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ತಕ್ಷಣವೇ ಕ್ರಮ ಕೈಗೊಳ್ಲುವಂತೆ ರಾಜ್ಯದ ಗೃಹಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ಚೆನ್ನೈ ಪೊಲೀಸ್ ಆಯುಕ್ತರಿಗೆ ಆದೇಶ ನೀಡಬೇಕೆಂದು ಕೋರಿ ಅಬ್ದುರ್ರಹ್ಮಾನ್ ಎಂಬವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾಯಮೂರ್ತಿ ಎಂ.ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.
ಮಕ್ಕಾ ಮಸೀದಿ ಶರಿಯತ್ ಕೌನ್ಸಿಲ್ ತನ್ನ ನ್ಯಾಯ ನಿರ್ಣಯದ ಆದೇಶಗಳನ್ನು ತಾನು ಕಲಾಪಗಳನ್ನು ನಡೆಸಿದ ಸ್ಥಳಗಳಲ್ಲಿ ಅದರಲ್ಲೂ ಮಸೀದಿಯ ಒಳಗಡೆಯೇ ಬೋರ್ಡ್‌ನಲ್ಲಿ ಪ್ರಕಟಿಸಿರುವ ಬಗ್ಗೆ ಅರ್ಜಿದಾರರು ದಾಖಲೆಗಳನ್ನು ಒದಗಿಸಿದ್ದರು. ‘‘ ‘ಶರಿಯತ್ ಕೌನ್ಸಿಲ್’ ಪರಸ್ಪರ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸುತ್ತಿದ್ದರೆ. ಅದಕ್ಕೆ ನ್ಯಾಯಾಲಯದ ಆಕ್ಷೇಪವಿರುತ್ತಿರಲಿಲ್ಲ. ಆದರೆ ಅದು ನ್ಯಾಯನಿರ್ಣಯದ ವೇದಿಕೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ್ಜಿರುವ ಹಾಗೆ ಭಾವನೆಯನ್ನು ಮೂಡಿಸಿದೆ. ಹೀಗಾಗಿ ಶರೀಯತ್ ಕೌನ್ಸಿಲ್‌ನ ಈ ರೀತಿಯ ಕಾರ್ಯನಿರ್ವಹಣೆಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಬಗ್ಗೆ ತಮಿಳುನಾಡು ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ಪ್ರಸ್ತಾಪಿಸಿದ ನ್ಯಾಯಧೀಶರು, ಈಗಾಗಲೇ ಶರೀಯತ್ ಕೌನ್ಸಿಲ್ ನ್ಯಾಯನಿರ್ಣಯ ವೇದಿಕೆಯಾಗಿ ಕಾರ್ಯನಿರ್ವಹಿಸಿರುವುದನ್ನು ನಿಲ್ಲಿಸಿರುವುದಾಗಿ ಹೇಳಿರುವುದರಿಂದ, ಈ ಬಗ್ಗೆ ಯಾವುದೇ ಆದೇಶವನ್ನು ನೀಡುವ ಅಗತ್ಯವಿಲ್ಲವೆಂದು ಹೇಳಿದೆ.
ತಮಿಳುನಾಡು ಹೈಕೋರ್ಟ್ ಡಿಸೆಂಬರ್ 19ರಂದು ಆದೇಶವೊಂದನ್ನು ಹೊರಡಿಸಿ, ಪ್ರಾರ್ಥನಾ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಿಕೊಳ್ಳಬೇಕಾಗಿದ್ದು, ಅಂತಹ ಸ್ಥಳಗಳಲ್ಲಿ ಯಾವುದೇ ರೀತಿಯ ನ್ಯಾಯ ನಿರ್ಣಯ ವೇದಿಕೆಗಳು ಅಸ್ತಿತ್ವದಲ್ಲಿಲ್ಲವೆಂಬ ಬಗ್ಗೆ ತನಗೆ ನಾಲ್ಕು ವಾರಗಳೊಳಗೆ ವರದಿಯೊಂದನ್ನು ಸಲ್ಲಿಸುವಂತೆ ಸೂಚಿಸಿತ್ತು.







