ಮಾರ್ಚ್‌ನೊಳಗೆ ಕೇರಳ ಬಯಲು ಶೌಚಾಲಯ ಮುಕ್ತ ರಾಜ್ಯ

ತಿರುವನಂತಪುರಂ,ಜ.20: ಈ ವರ್ಷದ ಮಾರ್ಚ್ ಅಂತ್ಯದೊಳಗೆ ಕೇರಳವನ್ನು ಶೇ.100ರಷ್ಟು ಬಯಲು ಶೌಚಾಲಯ ಮುಕ್ತ ರಾಜ್ಯವಾಗಿ ಘೋಷಿಸಲಾಗುವುದೆಂದು ರಾಜ್ಯಪಾಲ ಪಿ.ಸದಾಶಿವಂ ಶುಕ್ರವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಸುಧಾರಣೆಗೊಳಿಸುವ ಪ್ರಯತ್ನವಾಗಿ ರಾಜ್ಯ ಸರಕಾರವು ಜಾರಿಗೊಳಿಸಿರುವ ಹಲವಾರು ಉತ್ತೇಜಕ ಕ್ರಮಗಳ ಭಾಗವಾಗಿ ಕೇರಳವು ಹಿಮಾಚಲಪ್ರದೇಶ ಹಾಗೂ ಸಿಕ್ಕಿಂ ಬಳಿಕ ಸಂಪೂರ್ಣ ಬಯಲು ಶೌಚಾಲಯ ಮುಕ್ತ ರಾಜ್ಯವಾಗಲಿದೆ ಎಂದವರು ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ಕಿಮ್ಸ್ ಹೆಲ್ತ್‌ಕೇರ್ ಗ್ರೂಪ್‌ನ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಂ.ಐ.ಸಹದುಲ್ಲಾ ಬರೆದಿರುವ ಸೋಂಕುರೋಗಗಳ ಕುರಿತ ಪುಸ್ತಕೃತಿಯೊಂದನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಸ್ವಚ್ಛ ಭಾರತ್ ಅಭಿಯಾನದಿಂದಾಗಿ ದೇಶಾದ್ಯಂತ ಸ್ವಚ್ಛತೆಯಲ್ಲಿ ಗಣನೀಯವಾದ ಸುಧಾರಣೆಯಾಗಿದ್ದು, ಹೆಚ್ಚುಕಮ್ಮಿ ಪ್ರತಿಶತ ನೂರರಷ್ಟು ಮಂದಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ ಎಂದರು. ಆದಾಗ್ಯೂ ದೇಶದಲ್ಲಿ ಸೋಂಕುರೋಗಗಳು ಕ್ಯಾನ್ಸರ್, ಅಪಘಾತ ಹಾಗೂ ನೈಸರ್ಗಿಕ ವಿಕೋಪಗಳಿಗಿಂತ ಲೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದೆ ಎಂದು ಸದಾಶಿವಂ ಕಳವಳ ವ್ಯಕ್ತಪಡಿಸಿದರು.





