ಬೆಳ್ತಂಗಡಿ : ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಪ್ರತಿಭಟನೆ

ಬೆಳ್ತಂಗಡಿ , ಜ.20 : ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಕ್ಷ ದಾಸೋಹ ಯೋಜನೆಗೆ ಅನುದಾನ ಕಡಿತಗೊಳಿಸಿದ್ದು ನೌಕರರಿಗೆ ಕನಿಷ್ಠ ಕೂಲಿ ನೀಡದೆ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಾ ಮಹಿಳಾ ದ್ರೋಹಿಯಾಗಿ ವರ್ತಿಸುತ್ತಿದೆ. ಕಾರ್ಮಿಕರ ಬೇಡಿಕೆ ಈಡೇರದಿದ್ದರೆ ಜ. 31ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಿಐಟಿಯು ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್ ಎಂ ಎಚ್ಚರಿಸಿದರು.
ಅವರು ಶುಕ್ರವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಅಖಿಲ ಭಾರತ ಮುಷ್ಕರ ಅಂಗವಾಗಿ ಬೆಳ್ತಂಗಡಿ ತಾ. ಪಂ. ಕಚೇರಿ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರ ಅಕ್ಷರ ದಾಸೋಹ ಸೇರಿದಂತೆ ಅಂಗನವಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸರ್ವಶಿಕ್ಷಣ ಅಭಿಯಾನ, ಉದ್ಯೋಗ ಖಾತರಿ ಯೋಜನೆಗಳಿಗೆ 3 ಲಕ್ಷ ಕೋಟಿ ಅನುದಾನ ಕಡಿತಗೊಳಿಸುವ ಮೂಲಕ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ, ಜನವಾದಿ ಮಹಿಳಾ ಸಂಘಟನೆ ನಾಯಕಿ ನ್ಯಾಯವಾದಿ ಸುಕನ್ಯಾ ಹೆಚ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ, ಮುಖಂಡರುಗಳಾದ ಸುಮಿತ್ರಾ, ವನಿತಾ, ನಯನಾ ಶೆಟ್ಟಿ, ಲೀಲಾ, ಸರಸ್ವತಿ, ರೋಹಿನಿ, ಜಯರಾಮ ಮಯ್ಯ, ಲೋಕೇಶ್ ಕುದ್ಯಾಡಿ, ಅನಿಲ್ ಎಂ ಉಪಸ್ಥಿತರಿದ್ದರು.
ತಾ. ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಕ್ಷರದಾಸೋಹ ಯೋಜನೆಯ ಉಪನಿರ್ದೇಶಕ ಲಕ್ಷ್ಮಣ ಶೆಟ್ಟಿ, ತಾ. ಪಂ. ಮ್ಯಾನೇಜರ್ ಗಣೇಶ್ ಮನವಿ ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯ ಗಮನ ತರುವುದಾಗಿ ಭರವಸೆ ನೀಡಿದರು.







