ಮರಗಳ ಮಾರಣಹೋಮಕ್ಕೆ ಅರಣ್ಯ ಇಲಾಖೆ ತಡೆ
ವಾರ್ತಾಭಾರತಿ ವರದಿ ಫಲಶ್ರುತಿ
ಚಿಕ್ಕಮಗಳೂರು,ಜ.20: ಬಾಳೆಹೊನ್ನೂರು ಭಾಗದ ಎನ್‌ಆರ್‌ಪುರ ತಾಲೂಕಿನ ರಸ್ತೆಯ ಗಡಿಗೇಶ್ವರ ಸಹಿತ ವಿವಿಧೆಡೆ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ಥಿನ್ನಿಂಗ್ ಹೆಸರಿನಲ್ಲಿ ಸಾವಿರಾರು ಮರಗಳನ್ನು ಧರೆಗೆ ಉರುಳಿಸುತ್ತಿದ್ದ ಅರಣ್ಯ ಇಲಾಖೆಯ ಕೃತ್ಯಕ್ಕೆ ಶುಕ್ರವಾರ ಬೆಳಗಿನಿಂದ ಕಡಿವಾಣ ಬಿದ್ದಿದೆ.
ತಕ್ಷಣದಿಂದಲೇ ಥಿನ್ನಿಂಗ್ ಅಥವಾ ಇನ್ನಿತರ ಹೆಸರಿನಲ್ಲಿ ಯಾವುದೇ ರೀತಿಯ ಮರಗಳನ್ನು ಕಡಿಯದಂತೆ ಹಿರಿಯ ಅರಣ್ಯ ಅಧಿಕಾರಿ ಆದೇಶ ನೀಡಿದ್ದಾರೆ. ಥಿನ್ನಿಂಗ್ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯ, ಕಿರು ಅರಣ್ಯ ಹಾಗೂ ನೆಡುತೋಪು ಗಳಲ್ಲಿ ಸಾಗುವಾನಿ ಮರಗಳನ್ನು ಸದ್ದಿಲ್ಲದೆ ಕಡಿದು ಅರಣ್ಯ ಬೋಳು ಮಾಡುತ್ತಿದ್ದ ಅರಣ್ಯ ಇಲಾಖೆಯ ಕೃತ್ಯದ ಬಗ್ಗೆ ವಾರ್ತಾಭಾರತಿ ಪತ್ರಿಕೆ ಜ.20ರ ಸಂಚಿಕೆಯಲ್ಲಿ ಸಮಗ್ರ ವರದಿಯೊಂದನ್ನು ಪ್ರಕಟಿಸಿತ್ತು. ಸಾಗುವಾನಿ ಮರಗಳನ್ನು ಕಡಿಯುವುದಕ್ಕೆ ಪರಿಸರಾಸಕ್ತರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುದ್ದಿಯಾಗಿತ್ತು.
ಥಿನ್ನಿಂಗ್ ಹೆಸರಿನಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಬುಡ ಸಮೇತ ಕಡಿಯುತ್ತಿರುವ ಕೃತ್ಯವನ್ನು ಸ್ಥಳೀಯ ಸಂಘಟನೆಗಳು ಮತ್ತು ಪರಿಸರಾಸಕ್ತರು ವಿರೋಧಿಸುತ್ತಿದ್ದರೆ, ಅದನ್ನು ಇಲಾಖೆಯ ಕೆಲವು ಅಧಿಕಾರಿಗಳು ಸವಾಲಾಗಿ ತೆಗೆದುಕೊಂಡಿದ್ದರು. ರಾಜಕೀಯ ಒತ್ತಡ ಮತ್ತು ಟಿಂಬರ್ ಮಾಫಿಯಾದ ಆಮಿಷಕ್ಕೂ ಹಿರಿಯ ಅಧಿಕಾರಿಗಳು ಮಣಿದು, ಅರಣ್ಯ ಬಲಿಕೊಡಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಅರಣ್ಯ ಸಂರಕ್ಷಣೆ ಮತ್ತು ಪರಿಸರದ ಹಿತದೃಷ್ಟಿಯಿಂದ ಮರಗಳನ್ನು ಕಡಿಯಬಾರದು. ಆದರೆ, ಕಡಿತಲೆಗೆ ಆಯ್ದುಕೊಂಡಿರುವ ಸಾಗುವಾನಿ ನೆಡುತೋಪುಗಳಲ್ಲಿ ಅಧಿಕಾರಿಗಳೆ ಮೊಕ್ಕಾಂ ಮಾಡಿ, ಜಿದ್ದಿಗೆ ಬಿದ್ದವರಂತೆ ನಿನ್ನೆಯಷ್ಟೇ ದೇವದಾನ ಮೀಸಲು ಅರಣ್ಯ ಮತ್ತು ಬಸವನಕೋಟೆ ಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿಸಿದ್ದರು.
ಒಟ್ಟಾರೆಯಾಗಿ ಚಿಕ್ಕಮಗಳೂರು ವೃತ್ತದ ವ್ಯಾಪ್ತಿಯ ಮೀಸಲು ಅರಣ್ಯ ಮತ್ತು ಸಾಗುವಾನಿ ನೆಡುತೋಪುಗಳಲ್ಲಿ ಮರಗಳ ಥಿನ್ನಿಂಗ್ ನಡೆಸಲು ರಾಜ್ಯ ಸರಕಾರ ಅರಣ್ಯ ಇಲಾಖೆಗೆ 5 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ನಡೆಯುತ್ತಿದ್ದ ಕಾರ್ಯಕ್ಕೆ ಸದ್ಯ ಬ್ರೇಕ್ ಬಂದಿರುವುದು ಪರಿಸರಾಸ್ತಕರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.
ನೆಡುತೋಪುಗಳಲ್ಲಿ ತಾಂತ್ರಿಕವಾಗಿ ಥಿನ್ನಿಂಗ್ ಮಾಡುವುದು ಇಲಾಖೆಯ ಯೋಜನೆಯಲ್ಲಿತ್ತು. ಆದರೆ, ಜಿಲ್ಲೆಯ ಅರಣ್ಯಗಳಲ್ಲಿ ಕೈಗೊಂಡಿದ್ದ ಮರ ಕಡಿಯುವ ಕಾರ್ಯಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡುವಂತೆ ವಿಚಕ್ಷಣ ದಳಕ್ಕೆ ಹಿರಿಯ ಅರಣ್ಯಾಧಿಕಾರಿ ಸೂಚನೆ ನೀಡಿದ್ದಾರೆ.
ರಂಗಸ್ವಾಮಿ ಎಸಿಎಫ್,ಚಿಕ್ಕಮಗಳೂರು







