ವಿವಿಗಳಲ್ಲಿ ಭ್ರಷ್ಟಾಚಾರದ ಆರೋಪ
‘ತನಿಖೆಗೆ ತ್ರಿಸದಸ್ಯ ಸಮಿತಿ ನೇಮಕ’

ದಾವಣಗೆರೆ, ಜ.20: ರಾಜ್ಯದ ಬಹುತೇಕ ವಿಶ್ವವಿದ್ಯಾನಿಲ ಯಗಳಲ್ಲಿ ಭ್ರಷ್ಟಾಚಾರ ನಡೆದಿರುವ ಮಾಹಿತಿ ಕೇಳಿ ಬಂದಿದ್ದು, ಭ್ರಷ್ಟಾಚಾರ ನಡೆಸಿದ ವಿವಿಗಳ ತನಿಖೆಗಾಗಿ ಅಧಿಕಾರಿಗಳ ತ್ರಿಸದಸ್ಯ ಸಮಿತಿ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ವಿವಿ ಸೇರಿದಂತೆ ಬಹಳಷ್ಟು ವಿವಿಗಳಲ್ಲಿ ನಿಯಮಬಾಹಿರ ಕಾರ್ಯನಿರ್ವಹಣೆ, ಅಕ್ರಮ, ಭ್ರಷ್ಟಾಚಾರದಂತಹ ಆರೋಪ ಕೇಳಿಬರುತ್ತಿವೆ. ಇದರ ತನಿಖೆಗೆ ಜಿಲ್ಲಾಧಿಕಾರಿ, ಜಿಪಂ ಲೆಕ್ಕಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಭಿಯಂತರರನ್ನು ಒಳಗೊಂಡ ಮೂರು ಜನರ ಸಮಿತಿ ನೇಮಿಸಲಾಗುವುದು ಎಂದರು.
ವಿವಿಗಳ ಬಗೆಗಿನ ಆರೋಪಗಳ ಕುರಿತು ಒಂದು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು,
ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಚಿವರು ತಿಳಿಸಿದರು. ಅನೇಕ ವಿವಿಗಳ ಕುಲಪತಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಪರಮಾಧಿಕಾರವಿದ್ದು, ತನಿಖಾ ಸಮಿತಿ ವರದಿ ಬಂದ ಬಳಿಕ ಕ್ರಮಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು. ಭ್ರಷ್ಟಾಚಾರಿಗಳಿಗೆ ಶಿಕ್ಷೆ ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ 3,000 ಸಹ ಪ್ರಾಧ್ಯಾಪಕರು ಹಾಗೂ 360 ಪ್ರಾಂಶುಪಾಲರ ಹುದ್ದೆ ಖಾಲಿಯಿದ್ದು, ಈಗಾಗಲೇ 2,000 ಸಹಪ್ರಾಧ್ಯಾಪಕರ ಹುದ್ದೆಗಳ ನೇಮಕಕ್ಕೆ ಮೆರಿಟ್ ಆಧಾರದಲ್ಲಿ ಅರ್ಜಿ ಕರೆಯಲಾಗಿದೆ. ಪರಿಶೀಲನೆ ವೇಳೆ 40 ನಕಲಿ ಪ್ರಮಾಣಪತ್ರಗಳು ಪತ್ತೆಯಾಗಿವೆ. ಧಾರವಾಡದ ಕರ್ನಾಟಕ ವಿವಿಯಲ್ಲಿ ಪ್ರಾರಂಭಿಸುತ್ತಿರುವ ಉನ್ನತ ಶಿಕ್ಷಣ ಅಕಾಡಮಿಯಲ್ಲಿ ವೃತ್ತಿಪರ ತರಬೇತಿ ನೀಡಿದ ನಂತರ ಸಹಪ್ರಾಧ್ಯಾಪಕರ ನೇಮಕ ಅಂತಿಮಗೊಳ್ಳಲಿದೆ ಎಂದರು.
ಪ್ರಾಂಶುಪಾಲರ ಹುದ್ದೆಗಳಿಗೆ ಹಾಲಿ ಪ್ರಾಧ್ಯಾಪಕರನ್ನು ಹಿರಿತನ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸರಿಸಿ ನೇಮಕ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಯುಜಿಸಿ ಮಾರ್ಗಸೂಚಿಯಂತೆ ನಿಯಮಾವಳಿ ತಿದ್ದುಪಡಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ವಿವರಿಸಿದರು.
ರಾಜ್ಯದ 412 ಸರಕಾರಿ ಪದವಿ ಕಾಲೇಜು ಹಾಗೂ 17 ವಿಶ್ವವಿದ್ಯಾನಿಲಯಗಳ ಭೌತಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿಶ್ವ ಬ್ಯಾಂಕ್‌ನಿಂದ 3 ಸಾವಿರ ಕೋಟಿ ರೂ.ಗೂ ಹೆಚ್ಚು ಆರ್ಥಿಕ ನೆರವು ಪಡೆಯಲು ಇಲಾಖೆ ನಿರ್ಧರಿಸಿದೆ ಎಂದರು.
ಆರ್ಥಿಕ ತಜ್ಞರೂ ಆಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಕೂಲ್ ಆಫ್ ಇಕನಾಮಿಕ್ಸ್ ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ 44 ಎಕರೆ ಜಾಗ ಪಡೆಯಲಾಗಿದೆ. ಈಗಾಗಲೇ ಸರಕಾರ 107 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಮುಂದಿನ 15 ದಿನದಲ್ಲಿ ವಿಶೇಷ ಅಧಿಕಾರಿ ಮತ್ತು ಸಲಹೆಗಾರರನ್ನು ನಿಯೋಜಿಸಲಾಗುವುದು. ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ







