ಮರಣ ಪತ್ರ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳು: ಆರೋಪ
ಕಾರವಾರ, ಜ.20: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರೂ ಅಧಿಕಾರಿಗಳು ಎರಡು ವರ್ಷಗಳಿಂದ ಮರಣ ದಾಖಲೆ ಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಮೃತ ಗಂಡನ ಮರಣ ದಾಖಲೆ ಕೊಡಿ. ಇಲ್ಲವೇ ಅವರನ್ನು ಹುಡುಕಿ ಕೊಡಿ ಎಂದು ಮೃತರ ಪತ್ನಿ ತಾಲೂಕಿನ ಮಾಜಾಳಿಯ ಗಾಂವಗೇರಿ ನಿವಾಸಿ ಗೀತಾ ಲೋಕೇಶ ನಾಯ್ಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೀತಾ ಲೋಕೇಶ ನಾಯ್ಕ, ಪತಿಯ ಮರಣ ದಾಖಲೆಗಾಗಿ ಕಳೆದ ಎರಡು ವರ್ಷಗಳಿಂದ ಅಲೆಯುತ್ತಿದ್ದೇನೆ. ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಗಂಡ 2015ರ ಮೇ 15 ರಂದು ಸಾವನ್ನಪ್ಪಿದ್ದರು.
ಈ ಬಗ್ಗೆ ಬಂಧನದಲ್ಲಿದ್ದ ಪತಿಯು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರಿಂದ ಮತ್ತು ಮೃತರ ಮೈ ಮೇಲೆ ಕಲೆಗಳಿರುವುದರಿಂದ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು.
ಮೇ 26 ರಂದು ಸರಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವ ಸಂಸ್ಕಾರ ಮಾಡಲಾಗಿದೆ. ಆದರೆ, ಈಗ ಮರಣ ದಾಖಲೆಯನ್ನು ಕೇಳಿದರೂ ಯಾವೊಬ್ಬ ಅಧಿಕಾರಿಯೂ ಸರಿಯಾಗಿ ಮಾಹಿತಿ ನೀಡದೇ ಅಲ್ಲಿ ಇಲ್ಲಿ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಪತಿಯ ಸಾವು ಅಸಹಜವಾಗಿರುವ ಕಾರಣ ಪ್ರಕರಣದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಆಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ, ತನಿಖೆ ನಡೆಸಿ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರಿಗೆ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪ್ರಕರಣದ ಬಗ್ಗೆ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಮರಣ ದಾಖಲೆ ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ನಗರಸಭೆ, ಜಿಲ್ಲಾ ಕೇಂದ್ರ ಕಾರಾಗೃಹ, ಜಿಲ್ಲಾ ಆಸ್ಪತ್ರೆ ಎಲ್ಲ ಕಡೆಗಳಲ್ಲೂ ಮರಣ ದಾಖಲೆ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಮರಣ ದಾಖಲೆ ಲಭ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ತೀರಾ ಬಡತನದಲ್ಲಿರುವ ಮಹಿಳೆಗೆ ಮಗುವಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಲು ಪತಿಯ ಮರಣ ದಾಖಲೆ ಅವಶ್ಯವಾಗಿದೆ ಎಂದು ಗೀತಾ ತನ್ನ ಅಸಹಾಯಕತೆ ವ್ಯಕ್ತಪಡಿಸಿದರು.
ಅಧಿಕಾರಿಗಳ ಸತಾಯಿಸುವಿಕೆಯಿಂದಾಗಿ ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದು ಮಗನ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗಂಡನ ಮರಣ ದಾಖಲೆಯನ್ನು ನೀಡಲು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಇಲ್ಲವಾದರೆ ನನ್ನ ಗಂಡ ಬದುಕಿದ್ದಲ್ಲಿ ಅವರನ್ನು ಹುಡುಕಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭ ಜನಶಕ್ತಿ ವೇದಿಕೆ ಮಾಧವ ನಾಯಕ, ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.







