ಹಾಕಿ ಇಂಡಿಯಾ ಲೀಗ್: ಇಂದು ದಬಾಂಗ್ ಮುಂಬೈ ಆಟ ಶುರು

ಮುಂಬೈ, ಜ.20: ಕಳೆದ ನಾಲ್ಕು ಆವೃತ್ತಿಯ ಹಾಕಿ ಇಂಡಿಯಾ ಲೀಗ್(ಎಚ್‌ಐಎಲ್)ನಲ್ಲಿ ಸೆಮಿ ಫೈನಲ್‌ಗೆ ತಲುಪಲು ವಿಫಲವಾಗಿದ್ದ ದಬಾಂಗ್ ಮುಂಬೈ ತಂಡ ಶನಿವಾರದಿಂದ ತಿಂಗಳಾಂತ್ಯದ ತನಕ ತವರು ಮೈದಾನದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಈ ವರ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಶನಿವಾರ ಎರಡು ಬಾರಿಯ ಚಾಂಪಿಯನ್ ರಾಂಚಿ ರೇಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿರುವ ಮುಂಬೈ ತಂಡ ಆ ನಂತರ ಯುಪಿ ವಿಝಾರ್ಡ್ಸ್(ಜ.24), ಹಾಲಿ ಚಾಂಪಿಯನ್‌ಗಳಾದ ಪಂಜಾಬ್ ವಾರಿಯರ್ಸ್(ಜ.27), 2014ರ ಚಾಂಪಿಯನ್ ದಿಲ್ಲಿ ವೇವ್‌ರೈಡರ್ಸ್(ಜ.30) ಹಾಗೂ ಕಳೆದ ವರ್ಷದ ಫೈನಲಿಸ್ಟ್ ಕಳಿಂಗ ಲ್ಯಾಸೆರ್ಸ್(ಜ.31) ತಂಡವನ್ನು ಎದುರಿಸಲಿದೆ.
ಮುಂಬೈ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ಮಿಶ್ರಣವಿದೆ. ಜೂನಿಯರ್ ವಿಶ್ವಕಪ್ ವಿಜೇತ ತಂಡದ ಐವರು ಆಟಗಾರರು ತಂಡದಲ್ಲಿದ್ದಾರೆ. ಅವರುಗಳೆಂದರೆ: ಗೋಲ್‌ಕೀಪರ್ ಕೃಷ್ಣನ್ ಪಾಠಕ್, ಡ್ರಾಗ್ ಫ್ಲಿಕರ್, ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್, ಮಿಡ್‌ಫೀಲ್ಡರ್‌ಗಳಾದ ನೀಲಕಂಠ ಶರ್ಮ, ಮನ್‌ಪ್ರೀತ್ ಸಿಂಗ್, ಫಾರ್ವರ್ಡ್ ಗುರ್ಜಂತ್ ಸಿಂಗ್ ಅವರಿದ್ದಾರೆ.





