ಕಾರವಾರ: 6 ಹೆದ್ದಾರಿ ಗಸ್ತು ವಾಹನಗಳ ಆಗಮನ
ಕಾರವಾರ, ಜ.20: ಜಿಲ್ಲೆಯ ಹೆದ್ದಾರಿಗಳಲ್ಲಿ ಸಂಭವಿಸಬಹುದಾದ ಅಪರಾಧಗಳನ್ನು ತಡೆಯಲು ಹಾಗೂ ಅಪಘಾತ ಸಂದರ್ಭಗಳಲ್ಲಿ ಗಾಯಾಳುಗಳಿಗೆ ತ್ವರಿತವಾಗಿ ನೆರವಾಗಲು 6 ಹೆದ್ದಾರಿ ಗಸ್ತು ವಾಹನಗಳು ನಗರಕ್ಕೆ ಆಗಮಿಸಿವೆ.
ರಾಜ್ಯಾದ್ಯಂತ ಹೆದ್ದಾರಿಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ 100 ಗಸ್ತು ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಜಿಲ್ಲೆಗೆ 6 ವಾಹನಗಳನ್ನು ನೀಡಲಾಗಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಸಂದರ್ಭದಲ್ಲಿ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು, ಗಾಯಾಳುಗಳನ್ನು ತುರ್ತಾಗಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ದಾಖಲಿಸುವುದು, ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ತಡೆಯುವುದು ಮುಂತಾದ ಪ್ರಮುಖ ಕಾರ್ಯಗಳನ್ನು ಈ ಗಸ್ತು ವಾಹನಗಳು ನಿರ್ವಹಿಸಲಿವೆ.
ಹೆದ್ದಾರಿಗಳಲ್ಲಿ 40ರಿಂದ 50 ಕಿ.ಮೀ. ವ್ಯಾಪ್ತಿಯ ಅಂತರಕ್ಕೆ ಒಂದೊಂದು ವಾಹನಗಳು ನಿಯೋಜನೆಗೊಳ್ಳಲಿವೆ. ಪ್ರಸ್ತುತ ಈ ವಾಹನಗಳು ಜಿಲ್ಲಾ ಸಶಸ್ತ್ರ ಪಡೆ ಠಾಣೆಯ ಸುಪರ್ದಿಗೆ ನೀಡಲಾಗಿದೆ. ಹೆದ್ದಾರಿ ಗಸ್ತು ವಾಹನಗಳಿಗೆ ಹೊಸ ಚಾಲಕರನ್ನು ನೇಮಿಸದ ಕಾರಣ, ಇಲಾಖೆಯಲ್ಲಿರುವ ಚಾಲನಾ ವೃತ್ತಿ ಬಲ್ಲ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ತರಬೇತಿ ಪಡೆದ ಹೆಡ್ ಕಾನ್‌ಸ್ಟೇಬಲ್, ಎಎಸ್ಸೈ ಗಸ್ತು ವಾಹನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಆದರೆ ಈ ನಡುವೆ ಈ ಕಾರುಗಳಿಗೆ ಡ್ರೈವರ್‌ಗಳ ಕೊರತೆ ಇದೆ ಎನ್ನುವ ಆರೋಪ ಕೇಳಿ ಬಂದಿದೆ.





