ಜಿಲ್ಲೆಗೆ ಎಂಡೋ ಶಾಸ್ವತ ಪುನರ್ವಸತಿ ಕೇಂದ್ರ ಮಂಜೂರಾತಿಗೆ ಆಗ್ರಹ
ಎಂಡೋ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಗೆ ಮನವಿ

ಉಪ್ಪಿನಂಗಡಿ, ಜ.20 : ಎಂಡೋಸಲ್ಫಾನ್ ಸಿಂಪರಣೆಯ ದುಷ್ಪರಿಣಾಮದಿಂದಾಗಿ ತತ್ತರಿಸಿರುವ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಅಗತ್ಯ ಅನುದಾನ ಮೀಸಲು ಇರಿಸಿ, ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ದ.ಕ. ಜಿಲ್ಲಾ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಗುರುವಾರ ಮಂಗಳೂರು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಸಾವಿರಕ್ಕೂ ಮಿಕ್ಕಿ ಸಂತ್ರಸ್ತರಿದ್ದಾರೆ. ಇವರುಗಳು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಹೆತ್ತವರನ್ನೇ ಅವಲಂಭಿಸಿದ್ದಾರೆ. ಇವರ ಜೀವನ ನರಕ ಸದೃಶವಾಗಿದೆ. ಹೆತ್ತವರು ಸಂತ್ರಸ್ತರ ಸರಳಾಟ, ಚೀರಾಟ, ನೋವು, ವೇದನೆ ನೋಡುತ್ತಲೇ ಖಿನ್ನತೆಗೆ ಒಳಗಾಗಿದ್ದಾರೆ. ಈಗಾಗಲೇ ಬೆಳ್ತಂಗಡಿ ತಾಲ್ಲೂಕಿನ ಆಲಡ್ಕ ಎಂಬಲ್ಲಿ ಬಾಬು ಗೌಡ ಕುಟುಂಬದ 4 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಹೆತ್ತವರ ಅಗಲಿಕೆಯ ನಂತರ ಸಂತ್ರಸ್ಥರ ಗತಿ ಏನು? ಎನ್ನುವಂತಾಗಿದೆ.
ಈ ನಿಟ್ಟಿನಲ್ಲಿ ಜರೂರು ಆಗಿ "ಶಾಶ್ವತ ಪುನರ್ವಸತಿ ಕೇಂದ್ರ" ಆಗಬೇಕಾಗಿದ್ದು, ಸರ್ಕಾರ ಇದನ್ನು ಆದ್ಯತೆ ನೆಲೆಯಲ್ಲಿ ಮಂಜೂರು ಮಾಡಬೇಕು ಹಾಗೂ ಉಳಿದಂತೆ ಈ ಕೆಳಗಿನ 6 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಂಡೋ ಸಂತ್ರಸ್ಥರು ಅತ್ಯಧಿಕ ಇರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಈ ಮೂರು ಜಿಲ್ಲೆಯಲ್ಲಿ ಶೀಘ್ರವಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಬೇಕಾಗಿದೆ. (ಈ ಪೈಕಿ ಪುತ್ತೂರು ತಾಲ್ಲೂಕಿನ ಆಲಂಕಾರು ಎಂಬಲ್ಲಿ ಈಗಾಗಲೇ 5 ಎಕ್ರೆ ಜಾಗ ಇದಕ್ಕಾಗಿ ಕಾಯ್ದಿರಿಸಲಾಗಿದೆ).
ಈಗಿರುವ ಮಾಸಾಸನ ರೂಪಾಯಿ 3 ಸಾವಿರ ಮತ್ತು 1500ನ್ನು 6 ಸಾವಿರಕ್ಕೆ ಹಾಗೂ 4 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರ ಹೆತ್ತವರಿಗೆ 3 ಸಾವಿರ ರೂಪಾಯಿ ಮಾಸಾಸನ ಕೊಡಬೇಕು, ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರ ಮನೆಗೆ ವಾರಕ್ಕೊಮ್ಮೆ ನುರಿತ ವೈದ್ಯರ ಭೇಟಿ, ಎಂಡೋ ಪಾಲನಾ ಕೇಂದ್ರಗಳ ಮತ್ತು ಪುನರ್ವಸತಿ ಕೇಂದ್ರಗಳ ಜವಾಬ್ದಾರಿಯನ್ನು ಈಗಾಗಲೇ ಎಂಡೋ ಸಂತ್ರಸ್ತರ ಕುಟುಂಬದ ಸದಸ್ಯರಿಂದಲೇ ಸ್ಥಾಪಿಸಲ್ಪಟ್ಟ ದ.ಕ. ಜಿಲ್ಲಾ ಎಂಡೋ ಸಂತ್ರಸ್ತರ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ಕೊಡಬೇಕು, ಶಾಸ್ವತ ಪುನರ್ವಸತಿ ಪ್ಯಾಕೇಜ್‌ಗೆ ನಮ್ಮ ಹೋರಾಟಕ್ಕೆ ಸ್ಪಂಧಿಸಿದ ಮಾಜಿ ರಾಷ್ಟ್ರಪತಿ ದಿವಂಗತ "ಡಾ ಎಪಿಜೆ ಅಬ್ದುಲ್ ಕಲಾಂ ಪರಿಹಾರ ಪ್ಯಾಕೇಜ್" ಎಂದು ನಾಮಕರಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಕೆಪಿಸಿಸಿ ಸದಸ್ಯರಾದ ಡಾ ರಘು, ಪಿ.ವಿ. ಮೋಹನ್, ಎಂಡೋ ವಿರೋಧಿ ಹೋರಾಟ ಸಮಿತಿ ಸದಸ್ಯರುಗಳಾದ ರಾಮಮೋಹನ್ ರೈ, ಅಬ್ಬಾಸ್ ಕೊಂತೂರು, ಆನಂದ ಅಗತ್ತಾಡಿ ಇದ್ದರು.







