ಇಂಜಿನಿಯರ್ ಮೇಲೆ ವಿಮಾನ ಹರಿಸುತ್ತೇನೆ ಎಂದ ಪೈಲಟ್ !
ಮತ್ತೆ ಏನಾಯಿತು ಗೊತ್ತೇ ?

ಹೊಸದಿಲ್ಲಿ, ಜ.21: ಏರ್ ಇಂಡಿಯಾ ಪೈಲಟ್ ಒಬ್ಬ ಗ್ರೌಂಡ್ ಇಂಜಿನಿಯರ್ ಮೇಲೆ ವಿಮಾನ ಹರಿಸುತ್ತೇನೆಂದು ಬೆದರಿಸಿ ಕೆಲಸದಿಂದ ಒಂದು ತಿಂಗಳ ಕಾಲ ವಜಾಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಮಾನವನ್ನು ನಿಲ್ದಾಣದಿಂದ ಟೇಕ್ ಆಫ್ ಮಾಡಲು ಬೇಗನೇ ಸಿಗ್ನಲ್ ನೀಡದೇ ಇದ್ದರೆ ಈ ರೀತಿ ಮಾಡುವುದಾಗಿ ಪೈಲಟ್ ಬೆದರಿಸಿದ್ದನೆನ್ನಲಾಗಿದೆ.
ಘಟನೆ ಕಳೆದ ವರ್ಷ ಮುಂಬೈಯಲ್ಲಿ ನಡೆದಿದ್ದು, ಗ್ರೌಂಡ್ ಇಂಜಿನಿಯರ್ ವಿಮಾನ ಹಾರಾಟ ಪೂರ್ವ ತಪಾಸಣೆಗಳನ್ನು ನಡೆಸುತ್ತಿದ್ದಾಗ ಕಾಕ್ ಪಿಟ್ ನಲ್ಲಿದ್ದ ವಿಮಾನದ ಪೈಲಟ್ ಕೆಟ್ಟದ್ದಾಗಿ ಮಾತನಾಡಿದ್ದ. ಆ ನಿರ್ದಿಷ್ಟ ವಿಮಾನ ಬೆಂಗಳೂರಿಗೆ ಹೊರಡುವುದಿತ್ತು.
ಆದರೆ ಅದ್ಯಾವುದೋ ಕಾರಣಕ್ಕೆ ಭಾರೀ ಅವಸರದಲ್ಲಿದ್ದಂತೆ ಕಂಡುಬಂದ ಪೈಲಟ್ ‘‘ಪ್ಲೇನ್ ಚಡಾ ದೂಂಗಾ’’ (ವಿಮಾನವನ್ನು ನಿನ್ನ ಮೇಲೆ ಹರಿಸುತ್ತೇನೆ) ಎಂದೇ ಬಿಟ್ಟಿದ್ದ. ಈ ಘಟನೆಯ ನಂತರ ಇಂಜಿನಿಯರುಗಳು ಎಲ್ಲಾ ತಪಾಸಣೆಯನ್ನು ಕೂಡಲೇ ಮುಗಿಸಿ ವಿಮಾನಕ್ಕೆ ಹೊರಡಲು ಅವಕಾಶ ಮಾಡಿಕೊಟ್ಟಿದ್ದರು.
ತಮ್ಮ ಸಹೋದ್ಯೋಗಿಯೊಬ್ಬ ವಿಮಾನದ ಇಂಜಿನಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ನಡೆದ ಈ ಘಟನೆಯಿಂದ ಇಂಜಿನಿಯರುಗಳು ಸಾಕಷ್ಟು ವಿಚಲಿತರಾಗಿದ್ದರು. ವಿಮಾನ ಟೇಕ್-ಆಫ್ ಆಗುತ್ತಿದ್ದಂತೆಯೇ ಅವರು ಪೈಲಟ್ ವಿರುದ್ಧ ದೂರು ನೀಡಿದ್ದು, ಅಧಿಕಾರಿಗಳು ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಪರಿಶೀಲಿಸಿ ಪೈಲಟ್ ಹಾಗೆ ಮಾತನಾಡಿದ್ದಾನೆಂದು ದೃಢಪಟ್ಟ ನಂತರ ಆತನನ್ನು ಒಂದು ತಿಂಗಳು ಕಾಲ ಸೇವೆಯಿಂದ ವಜಾಗೊಳಿಸಿದ್ದರು. ಸಿಟ್ಟು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಒದಗಿಸಿ ನಂತರ ಮತ್ತೆ ಸೇವೆಗೆ ಸೇರಿಸಿಕೊಳ್ಳಲಾಯಿತು.







