‘ಗೆಳೆಯ ಕೈಕೊಟ್ಟರೆ ಶಿಕ್ಷಿತ ಮಹಿಳೆ ಅತ್ಯಾಚಾರ ಎಂದು ಆರೋಪಿಸುವಂತಿಲ್ಲ’
ಬಾಂಬೆ ಹೈಕೋರ್ಟ್ ತೀರ್ಪು

ಮುಂಬೈ, ಜ.21: ಮದುವೆಯಾಗುತ್ತೇನೆಂಬ ಭರವಸೆ ಪ್ರತಿ ಅತ್ಯಾಚಾರ ಪ್ರಕರಣಕ್ಕೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್ ಮಾಜಿ ಗೆಳತಿಯಿಂದ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿದ್ದ 21ರ ಪ್ರಾಯದ ಯುವಕನಿಗೆ ಜಾಮೀನು ಮಂಜೂರು ಮಾಡಿದೆ.
ವಿವಾಹಪೂರ್ವ ಲೈಂಗಿಕತೆಗೆ ಸಮ್ಮತಿ ನೀಡುವ ಶಿಕ್ಷಿತ ಮಹಿಳೆ ತನ್ನ ನಿರ್ಧಾರಕ್ಕೆ ಹೊಣೆ ಹೊರಬೇಕಾಗಿದೆ ಎಂದು ಜಸ್ಟಿಸ್ ಮೃದುಲಾ ಭಟ್ಕರ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಮದುವೆ ಸಮಯದಲ್ಲಿ ಕನ್ಯತ್ವ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಜವಾಬ್ದಾರಿ. ಆದರೆ, ಇಂದು ಯುವ ಪೀಳಿಗೆಗೆ ಲೈಂಗಿಕ ಚಟುವಟಿಕೆಯ ಬಗ್ಗೆ ಚೆನ್ನಾಗಿ ಮಾಹಿತಿಯಿದೆ. ಸಮಾಜ ಕೂಡ ಬದಲಾಗಿದ್ದು, ಇದು ನೈತಿಕಭಾರವನ್ನು ಹೊರುತ್ತಿದೆ. ಮದುವೆಯಾಗುತ್ತೇನೆಂದು ಭರವಸೆ ನೀಡುವುದು ಅತ್ಯಾಚಾರಕ್ಕೆ ಪ್ರೇರಣೆಯಾಗುವುದಿಲ್ಲ ಎಂದು ಜಸ್ಟಿಸ್ ಮೃದುಲಾ ಅಭಿಪ್ರಾಯಪಟ್ಟಿದ್ದಾರೆ.
ಗಂಡು-ಹೆಣ್ಣಿನ ಸಂಬಂಧ ಕಡಿದುಹೋದ ಬಳಿಕ ರೇಪ್ ಕೇಸ್ ದಾಖಲಿಸುವ ಟ್ರೆಂಡ್ ಈಗ ಹೆಚ್ಚಾಗುತ್ತಿದೆ. ಮಹಿಳೆ ಪ್ರಾಯ ಪ್ರಬುದ್ಧಳಾಗಿದ್ದು, ಶಿಕ್ಷಿತೆಯಾಗಿದ್ದರೆ ವಿವಾಹಪೂರ್ವ ಪರಿಣಾಮದ ಬಗ್ಗೆ ಆಕೆಗೆ ತಿಳಿದಿರುತ್ತದೆ ಎಂದು ತನ್ನ ಹಿಂದಿನ ಆದೇಶವನ್ನು ನ್ಯಾಯಾಧೀಶೆ ಉಲ್ಲೇಖಿಸಿದರು.





