ಕೋರ್ಟ್ ಮಾರ್ಷಲ್ ಆದ ಸೇನಾಧಿಕಾರಿಗೆ 26 ವರ್ಷಗಳ ಬಳಿಕ ನ್ಯಾಯ, ರಕ್ಷಣಾ ಸಚಿವಾಲಯಕ್ಕೆ 5 ಕೋಟಿ ದಂಡ

ಹೊಸದಿಲ್ಲಿ,ಜ.21 : ಬರೋಬ್ಬರಿ 26 ವರ್ಷಗಳ ಹಿಂದೆ ಕೋರ್ಟ್ ಮಾರ್ಷಲ್ ಗೊಳಗಾಗಿ ರಕ್ಷಣಾ ಸಚಿವಾಲಯದಿಂದ ರೂ 5 ಕೋಟಿ ದಂಡ ಕೂಡ ವಿಧಿಸಲ್ಪಟ್ಟಿದ್ದ ಸೇನಾಧಿಕಾರಿಗೆ ಕಡೆಗೂ ನ್ಯಾಯ ದೊರಕಿದ್ದು ಅವರನ್ನು ಮತ್ತೆ ಸೇವೆಗೆ ಸೇರಿಸಲಾಗಿದೆ.
ಶಿಕ್ಷೆಗೊಳಗಾಗಿದ್ದಾಗ ಎಸ್ ಎಸ್ ಚೌಹಾಣ್ ಎಂಬ ಹೆಸರಿನ ಈ ಸೇನಾಧಿಕಾರಿ ಆರನೇ ರಾಜಪುತ್ ಬೆಟಾಲಿಯನ್ನಿನಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದರು ಹಾಗೂ ಶ್ರೀನಗರದಲ್ಲಿ ಸೇವೆಯಲ್ಲಿದ್ದರು. ವಿವಿಧ ಆರೋಪ ಹೊರಿಸಿ ಅವರನ್ನು ಕೋರ್ಟ್ ಮಾರ್ಷಲ್ ಗೊಳಪಡಿಸಲಾಗಿತ್ತು ಹಾಗೂ ಅವರು ಮಾನಸಿಕವಾಗಿ ಅಸ್ಥಿರರು ಎಂದೂ ಹೇಳಲಾಗಿತ್ತು. ಸೇನಾ ಪಡೆಗಳ ಟ್ರಿಬ್ಯುನಲ್ ಗುರುವಾರ ನೀಡಿದ ತೀರ್ಪಿನಲ್ಲಿ ಕೋರ್ಟ್ ಮಾರ್ಷಲ್ ಆದೇಶವನ್ನು ರದ್ದುಪಡಿಸಿತಲ್ಲದೆ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ರಕ್ಷಣಾ ಸಚಿವಾಲಯಕ್ಕೆ ಆದೇಶಿಸಿದೆ.ಅವರಿಗೆ ಕಳೆದ 35 ವರ್ಷಗಳಿಂದ ದೊರೆಯಬೇಕಾದ ಎಲ್ಲಾ ಭಡ್ತಿ, ವೇತನ, ಭತ್ಯೆಗಳನ್ನು ಒದಗಿಸುವಂತೆಯೂ ಟ್ರಿಬ್ಯುನಲ್ ಆದೇಶಿಸಿದೆ. ಇದರ ಹೊರತಾಗಿ ಚೌಹಾಣ್ ಅವರಿಗೆ ರೂ 4 ಕೋಟಿ ಪರಿಹಾರ ಒದಗಿಸುವಂತೆ ಹಾಗೂ ರೂ 1ಕೋಟಿ ಹಣವನ್ನು ಸೇನಾ ಕಲ್ಯಾಣ ನಿಧಿಗೆ ನಾಲ್ಕು ತಿಂಗಳೊಳಗಾಗಿ ಒದಗಿಸುವಂತೆಯೂ ಹೇಳಲಾಗಿದೆ.
ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯವರಾದ ಚೌಹಾಣ್ ಅವರನ್ನು ನವೆಂಬರ್ 4, 1991ರಲ್ಲಿ ಕೋರ್ಟ್ ಮಾರ್ಷಲ್ ಗೊಳಪಡಿಸಲಾಗಿತ್ತು.ಎಪ್ರಿಲ್ 11, 1990ರಲ್ಲಿ ಶ್ರೀನಗರದಲ್ಲಿ ನಡೆದ ಕಾರ್ಯಾಚರಣೆಯೊಂದರ ವೇಳೆ ಚೌಹಾಣ್ ಗೆ 27.5 ಕೆಜಿ ತೂಕದ 147 ಚಿನ್ನದ ಬಿಸ್ಕತ್ತುಗಳು ದೊರೆತಂದಿನಿಂದ ಅವರಿಗೆ ಕಷ್ಟಗಳು ಆರಂಭಗೊಂಡಿದ್ದವು.ಇತರ ಸೈನಿಕರ ಸಮ್ಮುಖದಲ್ಲಿಯೇ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡು ಆಗಿನ ಕರ್ನಲ್ ಕೆ ಆರ್ ಎಸ್ ಪವಾರ್ ಹಾಗೂ ಲೆಫ್ಟಿನೆಂಟ್ ಜನರಲ್ ಝಕಿ ಮೊಹಮ್ಮದ್ ಅಹ್ಮದ್ ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ಚೌಹಾಣ್ ಹೇಳಿದ್ದರು.ಈ ಚಿನ್ನದ ಬಿಸ್ಕತ್ತುಗಳನ್ನು ಹಿರಿಯಾಧಿಕಾರಿಗಳು ದುರುಪಯೋಗ ಪಡಿಸಿ ಆರೋಪವನ್ನು ಚೌಹಾಣ್ ಮೇಲೆ ಹೊರಿಸಿದ್ದರೆಂದು ಆಪಾದಿಸಲಾಗಿತ್ತು. ವಿಚಾರಣೆ ವೇಳೆ ಚೌಹಾಣ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಹಾಕಲಾಗಿತ್ತು ಎಂದು ಸಾಬೀತಾಗಿತ್ತು.







