ಕರ್ತವ್ಯ ನಿರ್ವಹಿಸಿದ ಇಂಜಿನಿಯರ್‌ನಿಂದ ಬಿಜೆಪಿ ಶಾಸಕನ ಕಾಲು ಮುಟ್ಟಿ ಕ್ಷಮೆಯಾಚನೆ ಮಾಡಿಸಿದರು!

ನಾಗಾಂವ್(ಅಸ್ಸಾಂ),ಜ.21: ನಾಗಾಂವ್ ಜಿಲ್ಲೆಯ ಕೋಥಿಯಾಟೋಳಿ ಬಿಡಿಒ ಕಚೇರಿಯ ಇಂಜಿನಿಯರ್ ಬಿಜೆಪಿ ಶಾಸಕನ ಕಾಲು ಮುಟ್ಟಿ ಕ್ಷಮೆ ಯಾಚಿಸುವಂತೆ ಮಾಡಲಾಗಿದೆ. ಆತ ಮಾಡಿದ್ದ ತಪ್ಪು? ಕಚೇರಿಯ ರಸ್ತೆಗೆ ಅಡ್ಡವಾಗಿ ನಿಂತಿದ್ದ ಶಾಸಕರ ಕಾರನ್ನು ಅಲ್ಲಿಂದ ಸರಿಸಿ ತನ್ನ ಕರ್ತವ್ಯ ನಿರ್ವಹಿಸಿದ್ದು!
ಬಿಡಿಒ ಕಚೇರಿಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿರುವ ಜಯಂತ ದಾಸ್ ರಹಾ ವಿಧಾನಸಭಾ ಕ್ಷೇತ್ರದ ಶಾಸಕ ದಿಂಬೇಶ್ವರ ದಾಸ್ ಅವರ ಕಾಲುಗಳನ್ನು ಮುಟ್ಟಿ ಕ್ಷಮೆ ಯಾಚಿಸುತ್ತಿರುವ ದೃಶ್ಯ ಟಿವಿ ಸುದ್ದಿವಾಹಿನಿಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಪ್ರತ್ಯಕ್ಷದರ್ಶಿಗಳೂ ಇದ್ದಾರೆ.
ಆಗಿದ್ದೇನು....?
ಗುರುವಾರ ಬಿಡಿಒ ಕಚೇರಿಯ ದಿಢೀರ್ ತಪಾಸಣೆಗಾಗಿ ಶಾಸಕ ಮಹಾಶಯರು ತೆರಳಿದ್ದರು. ತನ್ನ ಕಾರನ್ನು ಬಿಂದಾಸ್ ಆಗಿ ಕಚೇರಿಯ ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದರು. ಜಯಂತ್ ದಾಸ್ ಅದನ್ನು ಅಲ್ಲಿಂದ ಸರಿಸಿ ಇತರ ವಾಹನಗಳ ಸಂಚಾರವನ್ನು ಸುಗಮಗೊಳಿಸಿದ್ದ.
ಇದು ದಿಂಬೇಶ್ವರ ದಾಸ್‌ರ ಬೆಂಬಲಿಗರಿಗೆ ಸಿಟ್ಟು ತರಿಸಿತ್ತು. ಅವರು ಈ ವಿಷಯವನ್ನು ಶಾಸಕರಿಗೆ ವರದಿ ಮಾಡಿದ್ದರು. ಶಾಸಕರು ಜಯಂತ್‌ಗೆ ಹಿಗ್ಗಾಮುಗ್ಗಾ ಬೈಯುತ್ತಿರುವ ಮತ್ತು ಬಳಿಕ ಆತ ಅವರ ಕಾಲು ಹಿಡಿದು ಕ್ಷಮೆ ಯಾಚಿಸುತ್ತಿರುವ ದೃಶ್ಯಗಳು ವೀಡಿಯೊ ತುಣುಕುಗಳಲ್ಲಿವೆ.
ಆದರೆ ಇಂಜಿನಿಯರ್ ತನ್ನ ಕಾಲನ್ನು ಹಿಡಿದಿದ್ದ ಎನ್ನುವುದನ್ನು ಶಾಸಕರು ಮಾಧ್ಯಮ ಗಳೆದುರು ನಿರಾಕರಿಸಿದ್ದಾರೆ.







