‘ಕರೋಡ್ಪತಿ’ ಬ್ಯಾಂಕ್ ಆಫೀಸ್ ಬಾಯ್ಗೆ ಐಟಿ ಸಮನ್ಸ್!

ಮಲಿಕ್ ಕೆಲಸ ಮಾಡುತ್ತಿರುವ ಬ್ಯಾಂಕ್
ಪುರ್ನಿಯಾ(ಬಿಹಾರ),ಜ.21: ಇಲ್ಲಿಯ ಐಸಿಐಸಿಐ ಬ್ಯಾಂಕಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಮಲಿಕ್ ಎಂಬಾತನ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂ.ಗಳ ಹಲವಾರು ವಹಿವಾಟುಗಳನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆಯು ಸಮನ್ಸ್ ಜಾರಿಗೊಳಿಸಿದೆ.
ಹೆಚ್ಚೇನೂ ವಿದ್ಯಾವಂತನಲ್ಲದ, ಸ್ಥಳೀಯ ಗುತ್ತಿಗೆ ಸಂಸ್ಥೆಯ ಮೂಲಕ ಬ್ಯಾಂಕಿನಲ್ಲಿ ದುಡಿಯುತ್ತಿರುವ ಮಲಿಕ್ ತಾನು ಅಮಾಯಕ ಎಂದು ಹೇಳಿಕೊಂಡಿದ್ದಾನೆ. ಈ ಖಾತೆಗಳಲ್ಲಿ ತಾನು ಯಾವುದೇ ವಹಿವಾಟು ನಡೆಸಿರುವುದನ್ನು ಆತ ನಿರಾಕರಿಸಿದ್ದಾನೆ.
ಬ್ಯಾಂಕಿನಲ್ಲಿರುವ ಮಲಿಕ್ನ ಎರಡು ಉಳಿತಾಯ ಖಾತೆಗಳು 2012 ಮತ್ತು 2016ರ ನಡುವೆ ಕೋಟ್ಯಂತರ ರೂ.ಗಳ ವಹಿವಾಟುಗಳನ್ನು ತೋರಿಸುತ್ತಿವೆ.
ಈ ಖಾತೆಗಳಲ್ಲಿ ಆನ್ಲೈನ್ ಮೂಲಕ ಹಣವನ್ನು ಜಮಾ ಮಾಡಲಾಗಿದೆ ಮತ್ತು ಚೆಕ್ಗಳು ಹಾಗೂ ಎಟಿಎಂ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕಿನ ಹೇಳಿಕೆಗಳು ಬೆಟ್ಟು ಮಾಡಿವೆ.
ಮೂರು ದಿನಗಳ ಹಿಂದೆ ಐಟಿ ಸಮನ್ಸ್ ತನಗೆ ತಲುಪಿದಾಗಲೇ ವಿಷಯ ತನಗೆ ಗೊತ್ತಾಗಿದ್ದು ಎನ್ನುವ ಮಲಿಕ್, ಆದರೆ ಕಳೆದ ವರ್ಷದ ಮೇ ತಿಂಗಳಲ್ಲಿ ಭಾಗಲ್ಪುರದ ಆದಾಯ ತೆರಿಗೆ(ತನಿಖೆ) ಜಂಟಿ ನಿರ್ದೇಶಕ ಮನೀಶ ಕುಮಾರ್ ಝಾ ಅವರಿಂದ ತನಗೆ ಪತ್ರವೊಂದು ಬಂದಿದ್ದನ್ನು ಒಪ್ಪಿಕೊಂಡಿದ್ದಾನೆ. ತನ್ನ ಸಹಿ ಮಾತ್ರ ಹಾಕುವಷ್ಟು ‘ವಿದ್ಯಾವಂತ ’ನಾಗಿರುವ ಮಲಿಕ್ಗೆ ಆಗ ಆ ಪತ್ರದಲ್ಲಿನ ವಿಷಯವೇನು ಎನ್ನುವುದು ಅರ್ಥವೇ ಆಗಿರಲಿಲ್ಲ. ಆದರೆ ಐಟಿ ಸಮನ್ಸ್ ಬಂದಾಗ ತಕ್ಷಣವೇ ಐಸಿಐಸಿ ಬ್ಯಾಂಕಿನ ಮ್ಯಾನೇಜರ್ರನ್ನು ಭೇಟಿಯಾಗಿದ್ದೆ. ಸುಮ್ಮನಿರುವಂತೆ ಮತ್ತು ಖಾತೆಗಳನ್ನು ಮುಚ್ಚಲು ಅರ್ಜಿಯನ್ನು ಬರೆದು ಕೊಡುವಂತೆ ಅವರು ತನಗೆ ತಿಳಿಸಿದ್ದರು ಎಂದು ಮಲಿಕ್ ಹೇಳಿದ್ದಾನೆ. ಅದೇ ರೀತಿ ಅರ್ಜಿಯನ್ನು ಆತ ಬರೆದುಕೊಟ್ಟಿದ್ದಾನೆ.
ಐಸಿಐಸಿಐ ಬ್ಯಾಂಕ್ 2010ರಲ್ಲಿ ತನ್ನ ಪುರ್ನಿಯಾ ಶಾಖೆಯನ್ನು ಆರಂಭಿಸಿದಾಗ ಜುಜುಬಿ 2,500 ರೂ.ಗಳ ವೇತನಕ್ಕೆ ಮಲಿಕ್ ಅಲ್ಲಿ ಕೆಲಸಕ್ಕೆ ಸೇರಿದ್ದ. ಆಗಿನ ಬ್ಯಾಂಕ್ ಅಧಿಕಾರಿಗಳು ತನ್ನ ಬಳಿಯಿಂದ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಪ್ರತಿಯನ್ನು ಪಡೆದುಕೊಂಡಿದ್ದರು ಮತ್ತು ಫಾರ್ಮ್ವೊಂದರಲ್ಲಿ ತನ್ನ ಸಹಿ ತೆಗೆದುಕೊಂಡಿದ್ದರು. ಆ ಬಳಿಕ ಏನಾಯಿತು ಎನ್ನುವುದು ತನಗೆ ಗೊತ್ತಿಲ್ಲ ಎಂದು ಮಲಿಕ್ ಹೇಳಿದ್ದಾನೆ.
ತನಗೀಗ ತಿಂಗಳಿಗೆ 5,800 ರೂ.ವೇತನ ಸಿಗುತ್ತಿದೆ. ಇದು ತನ್ನ ಕುಟುಂಬದ ತುತ್ತಿನ ಚೀಲಗಳನ್ನು ತುಂಬಲೇ ಸಾಕಾಗುತ್ತಿಲ್ಲ. ಇನ್ನು ಕೋಟ್ಯಂತರ ರು.ಗಳ ವಹಿವಾಟನ್ನು ನಡೆಸುವುದು ಎಲ್ಲಿಂದ ಎಂದು ಮಲಿಕ್ ಪ್ರಶ್ನಿಸಿದ.
ಈ ವಿಷಯದಲ್ಲಿ ತಾನು ಮಾತನಾಡುವಂತಿಲ್ಲ ಎಂದು ಐಸಿಐಸಿಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಯೋಗೇಶ ಹೇಳಿದ್ದಾರೆ.

(ವಿಜಯ್ ಮಲಿಕ್)







