ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

ಮಂಗಳೂರು, ಜ.21: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ, ದ.ಕ. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚೈಲ್ಡ್‌ಲೈನ್- 1098 ಸಂಸ್ಥೆಯು ಜಂಟಿಯಾಗಿ ಶನಿವಾರ ನಗರದ ಬದ್ರಿಯಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಸಮಾಜದ ಅನಿಷ್ಠ ಪದ್ಧತಿಗಳಲ್ಲಿ ಬಾಲ್ಯವಿವಾಹ ಕೂಡ ಒಂದು. ಇದರ ನಿರ್ಮೂಲನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಮಾನಸಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಲು ವಿವಾಹ ಅಗತ್ಯ. ಈ ಬಗ್ಗೆ ಗಂಡು- ಹೆಣ್ಣಿಗೆ ಸಂಪೂರ್ಣ ಅರಿವು ಇರಬೇಕು. ದಾಂಪತ್ಯ ಜೀವನ ನಡೆಸಲು ದೈಹಿಕ ಬಲಾಢ್ಯತೆ, ಪ್ರೌಢತೆ ಇರಬೇಕು. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಗಂಡು-ಹೆಣ್ಣಿಗೆ ಕನಿಷ್ಠ ಪ್ರಾಯವನ್ನು ಸರಕಾರ ನಿಗದಿ ಮಾಡಿದೆ ಎಂದು ಜೆ.ಆರ್. ಲೊಬೊ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಕಾರ್ಪೊರೇಟರ್ ಅಬ್ದುಲ್ಲತೀಫ್ , ಬದ್ರಿಯಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪಿ.ಸಿ. ಹಾಶಿರ್, ಬದ್ರಿಯಾ ಪಪೂ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಇಸ್ಮಾಯೀಲ್, ಮಕ್ಕಳ ರಕ್ಷಣಾ ಸಮಿತಿಯ ನಟರಾಜ್ ಉಪಸ್ಥಿತರಿದ್ದರು.
ನ್ಯಾಯವಾದಿ ಅನಿತಾ ಕಿಣಿ ಮತ್ತು ಪಡಿ, ವೆಲೊರೆಡ್ ಸಂಸ್ಥೆ ನಿರ್ದೇಶಕ ರೆನ್ನಿ ಡಿಸೋಜ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಮಕ್ಕಳ ರಕ್ಷಣೆಯ ಜಿಲ್ಲಾ ಅಧಿಕಾರಿ ಉಸ್ಮಾನ್ ಕಾರ್ಯಕ್ರಮ ನಿರೂಪಿಸಿದರು.







