‘ಸಮಾನ ಕೆಲಸಕ್ಕೆ ಸಮಾನ ವೇತನ’ಕ್ಕಾಗಿ ಆಗ್ರಹಿಸಿ ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಧರಣಿ

ಮಂಗಳೂರು, ಜ.21: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಚಾರಿತ್ರಿಕ ತೀರ್ಪು ನೀಡಿದೆ. ಅದನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಕ್ಷಣ ಮುಂದಾಗಬೇಕು ಎಂದು ಸಿಐಟಿಯು ಸಂಯೋಜಿತ ಮೆಸ್ಕಾಂ ಗುತ್ತಿಗೆ ನೌಕರರು ಶನಿವಾರ ಬಿಜೈನಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯ ಮುಂದೆ ಧರಣಿ ನಡೆಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕೆಂದು ಐತಿಹಾಸಿಕ ಮತ್ತು ಮಹತ್ವದ ತೀರ್ಪು ಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯವು ಸಮಾನ ಕೆಲಸಕ್ಕೆ ನೇಮಕಗೊಂಡ ಮತ್ತು ಸಮಾನ ಕರ್ತವ್ಯ , ಜವಾಬ್ದಾರಿ ನಿರ್ವಹಿಸುವ ನೌಕರರಿಗೆ ಇತರರಿಗಿಂತ ಕಡಿಮೆ ವೇತನ ನೀಡುವಂತಿಲ್ಲ ಎಂದು ಸ್ಪಷ್ಟ ಪಡಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಮಂದಿ ಗುತ್ತಿಗೆ ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ ಎಂದರು.
ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಗುತ್ತಿಗೆ ಕಾರ್ಮಿಕರನ್ನು ಖಾಯಂ ಕಾರ್ಮಿಕರಿಗಿಂತಲೂ ಅಧಿಕ ಹೊತ್ತು ದುಡಿಸುವ ಮೂಲಕ ಶೋಷಣೆ ಮಾಡಲಾಗುತ್ತದೆ. ಅಲ್ಲದೆ ಕಡಿಮೆ ಸಂಬಳ ನೀಡುತ್ತಿದೆ ಎಂದರು.
ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೋರಾಟದ ನೇತೃತ್ವವನ್ನು ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್, ಜಿಲ್ಲಾ ಮುಖಂಡರಾದ ಸುರೇಶ್ ಎಚ್., ಲೋಕೇಶ್ ಹೆಬ್ಬಾರ್, ಪ್ರಕಾಶ, ಕರುಣಾಕರ, ಜಯರಾಮ, ಕೇಶವ ನಾಯ್ಕಾ ಮುಂತಾದವರು ವಹಿಸಿದ್ದರು.







