ಬಿಹಾರ:ಪಾನನಿಷೇಧ ಬೆಂಬಲಿಸಿ 11,000 ಕಿ.ಮೀ.ಉದ್ದದ ಮಾನವ ಸರಪಳಿಯಲ್ಲಿ ಲಕ್ಷಾಂತರ ಜನರು

ಪಟ್ನಾ,ಜ.21: ನಿತೀಶ ಕುಮಾರ್ ನೇತೃತ್ವದ ರಾಜ್ಯ ಸರಕಾರದ ಪಾನನಿಷೇಧ ನೀತಿಯನ್ನು ಬೆಂಬಲಿಸಿ ಇಂದು ಬಿಹಾರದಾದ್ಯಂತ ನಡೆದ ಬೃಹತ್ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಲಕ್ಷಾಂತರ ಜನರು ಪಾಲ್ಗೊಂಡಿದ್ದರು.
11,000 ಕಿ.ಮೀ.ಗೂ ಉದ್ದದ ಈ ಮಾನವ ಸರಪಳಿ ವಿಶ್ವದಲ್ಲಿಯೇ ಅತ್ಯಂತ ಉದ್ದ ದ ಮಾನವ ಸರಪಳಿಯಾಗಿದೆ ಎಂದು ಬಿಹಾರ ಮುಖ್ಯ ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್ ತಿಳಿಸಿದರು. ಒಂದು ವಿದೇಶಿ ಮತ್ತು ಎರಡು ಇಸ್ರೋ ಉಪಗ್ರಹಗಳು, ನಾಲ್ಕು ವಿಮಾನಗಳು, ಎರಡು ಹೆಲಿಕಾಪ್ಟರ್‌ಗಳು ಮತ್ತು 40 ಡ್ರೋನ್‌ಗಳು ಈ ಮಾನವ ಸರಪಳಿಯ ಚಿತ್ರಗಳನ್ನು ಸೆರೆ ಹಿಡಿದವು.
ಜೆಡಿಯು,ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದವು. ಪ್ರತಿಪಕ್ಷ ಬಿಜೆಪಿ ನಾಯಕರೂ ಬೆಂಬಲವನ್ನು ಸೂಚಿಸಿದ್ದರು.
ಮಧ್ಯಾಹ್ನ 12:15ರಿಂದ 1 ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸುಮಾರು ಎರಡು ಕೋಟಿ ಜನರು ಪರಸ್ಪರ ಕೈ ಜೋಡಿಸಿದ್ದರು.
Next Story





