ಕೊರಗ-ಜೇನುಕುರುಬ ನಿರುದ್ಯೋಗಿಗಳಿಗೆ ಮಾಸಿಕ ವೇತನ: ಸಚಿವ ಎಚ್.ಆಂಜನೇಯ ಘೋಷಣೆ

ಬೆಂಗಳೂರು, ಜ. 21: ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಲಿತ ಕೊರಗ ಮತ್ತು ಜೇನುಕುರುಬ ಸಮುದಾಯದ ಆದಿವಾಸಿ ನಿರುದ್ಯೋಗಿ ಯುವಕ- ಯುವತಿಯರಿಗೆ ಮಾಸಿಕ ವೇತನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಘೋಷಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಯುಸಿಗೆ 2,500 ರೂ., ಪದವಿ-3,500 ರೂ. ಹಾಗೂ ಸ್ನಾತಕೋತ್ತರ ಪದವೀಧರರಿಗೆ 4,500 ರೂ.ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರಗ ಮತ್ತು ಜೇನುಕುರುಬ ಸಮುದಾಯದ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಿಲ್ಲ. ಹೀಗಾಗಿ ಆ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾಸಿಕ ವೇತನ ನೀಡಲು ಸರಕಾರ ನಿರ್ಧರಿಸಿದೆ ಎಂದು ಆಂಜನೇಯ ಹೇಳಿದರು.
ಆದಿವಾಸಿಗಳಿಗೆ ಸೌಲಭ್ಯ ವಿತರಣೆ: ಮೈಸೂರಿನಲ್ಲಿ ಫೆ.1ಕ್ಕೆ ಆದಿವಾಸಿಗಳಿಗೆ ಸೌಲಭ್ಯ ವಿತರಣಾ ಸಮಾವೇಶ ಏರ್ಪಡಿಸಲಾಗಿದೆ. ಕೌಶಲ್ಯಾಧಾರಿತ ತರಬೇತಿ ಪಡೆದ ಆದಿವಾಸಿ ಅಭ್ಯರ್ಥಿಗಳಿಗೆ ವಿವಿಧ ಸೌಲತ್ತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆಂದು ತಿಳಿಸಿದರು.
ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ 7ಜಿಲ್ಲೆಗಳ ಜೇನುಕುರುಬ, ಕಾಡು ಕುರುಬ, ಸೋಲಿಗ, ಎರವ, ಕೊರಗ, ಮಲೆ ಕುಡಿಯ, ಸಿದ್ದಿ, ಗೌಡ್ಲು, ಹಸಲರು ಸೇರಿದಂತೆ ಆದಿವಾಸಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು ಎಂದರು.
ಪೌಷ್ಟಿಕ ಆಹಾರ: ಚಾಮರಾಜನಗರ, ಮೈಸೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆದಿವಾಸಿಗಳಿಗೆ ನೀಡುವ ಮಾದರಿಯಲ್ಲೆ ಚಿಕ್ಕಮಗಳೂರು ಜಿಲ್ಲೆಯ ಗೌಡ್ಲು ಮತ್ತು ಹಸಲರ 5 ಸಾವಿರ ಕುಟುಂಬಗಳಿಗೆ ಆರು ತಿಂಗಳು ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದರು.
ಪ್ರತಿ ಕುಟುಂಬಕ್ಕೆ 15 ಕೆಜಿ ಅಕ್ಕಿ-ಗೋಧಿ, 5 ಕೆಜಿ ತೊಗರಿಬೇಳೆ, 5 ಕೆಜಿ ಹೆಸರು, ಉರುಳಿ ಕಾಳು, 2 ಲೀ.ಅಡುಗೆ ಎಣ್ಣೆ, 4 ಕೆಜಿ ಸಕ್ಕರೆ-ಬೆಲ್ಲ, 45 ಮೊಟ್ಟೆ, 1 ಕೆಜಿ ನಂದಿನಿ ತುಪ್ಪ ವಿತರಣೆ ಮಾಡಲಾಗುವುದು ಎಂದ ಅವರು, ರಾಜ್ಯದಲ್ಲಿನ 41,653 ಆದಿವಾಸಿಗಳ ಕುಟುಂಬಗಳಿಗೆ 55.25 ಕೋಟಿ ರೂ.ವೆಚ್ಚದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಎಂ ನಿರ್ಧಾರ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಸಂದರ್ಭದಲ್ಲಿ ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಲಿದ್ದಾರೆ. ಅನ್ಯಾಯಕ್ಕೆ ಒಳಗಾಗಿರುವ ಜನರ ನ್ಯಾಯ ದೊರಕಿಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಮೀಸಲಾತಿ ವರ್ಗೀಕರಣ ಸಂಬಂಧ ವೈಯಕ್ತಿಕವಾಗಿ ತಾನು ಏನನ್ನು ಹೇಳುವುದಿಲ್ಲ. ಎಲ್ಲಿ ಹೇಳಬೇಕೋ ಅಲ್ಲಿ ತನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಬೇಕಿದೆ ಎಂದು ಉತ್ತರ ನೀಡಿದರು.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧ ಸದಾಶಿವ ಆಯೋಗದ ವರದಿ ವಿರೋಧಿಸಿ ಕಾಂಗ್ರೆಸ್ ಪಕ್ಷ ಕೆಲವರು ತಮ್ಮ ಪದಚ್ಯುತಿಗೆ ಪಟ್ಟು ಹಿಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತನಗೇನು ಗೊತ್ತಿಲ್ಲ. ಆದರೆ, ಅನ್ಯಾಯಕ್ಕೆ ಒಳಗಾದವರ ಪರ ನನ್ನ ಧ್ವನಿ ಎಂದಿಗೂ ನಿಲ್ಲದು ಎಂದು ಸ್ಪಷ್ಟಣೆ ನೀಡಿದರು.
ರಾಜ್ಯ ಸರಕಾರ ಕೈಗೊಂಡಿದ್ದ ಸಾಮಾಜಿ, ಆರ್ಥಿಕ ಸಮೀಕ್ಷಾ ವರದಿಯನ್ನು ಜನವರಿ ಅಂತ್ಯದೊಳಗೆ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ಆ ಬಳಿಕ ಒಳ ಮೀಸಲಾತಿ ವರ್ಗೀಕರಣದ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.







