ಸೈಬರ್ ಭದ್ರತೆಗಾಗಿ ಸ್ಥಾಪನೆಯಾಗಲಿದೆ ಹಣಕಾಸು ತುರ್ತು ಪ್ರತಿಕ್ರಿಯಾ ಕೇಂದ್ರ

ಜೈಪುರ,ಜ.21: ಸೈಬರ್ ಭದ್ರತೆಯನ್ನು ಖಚಿತಪಡಿಸಲು ಮತ್ತು ತಂತ್ರಜ್ಞಾನ ಮೂಲಸೌಕರ್ಯವನ್ನು ಬಲಗೊಳಿಸಲು ಕೇಂದ್ರ ಸರಕಾರವು ಪ್ರತ್ಯೇಕ ಹಣಕಾಸು ತುರ್ತು ಪ್ರತಿಕ್ರಿಯಾ ಕೇಂದ್ರವೊಂದನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅವರು ಇಂದು ತಿಳಿಸಿದರು.
ಇಲ್ಲಿ ನಡೆಯುತ್ತಿರುವ ಜೈಪುರ ಸಾಹಿತ್ಯೋತ್ಸವದಲ್ಲಿ ಡಿಜಿಟಲ್ ಆರ್ಥಿಕತೆ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೈಬರ್ ಭದ್ರತೆಯು ಇಂದು ಎಲ್ಲೆಡೆ ಕಳವಳದ ವಿಷಯವಾಗಿದೆ. ಆದರೆ ನಮ್ಮ ವ್ಯವಸ್ಥೆಗಳು ಇತರ ಯಾವುದೇ ವ್ಯವಸ್ಥೆಯಂತೆ ಸುರಕ್ಷಿತವಾಗಿವೆ. ಭಾರತವು ಬಹುಶಃ ಇತರ ರಾಷ್ಟ್ರಗಳಿಗಿಂತ ಹೆಚ್ಚು ಡಿಜಿಟಲ್ ಆಗುತ್ತಿರುವುದರಿಂದ ನಾವು ಮುನ್ನಡೆಯುತ್ತಿರುವಂತೆ ನಮ್ಮ ಮೂಲಸೌಕರ್ಯವನ್ನು ಇನ್ನಷ್ಟು ಬಲಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಸರಕಾರವು ಆರ್ಥಿಕತೆಯನ್ನು ಡಿಜಿಟಲ್ ಆಗಿಸಲು ಸುಧಾರಣೆಗಳಿಗೆ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ಮತ್ತು ಹಣಕಾಸು ಸಾಕ್ಷರತೆಯು ಮುಖ್ಯವಾಗಿದೆ ಮತ್ತು ಅದು ಸಾಕಾರಗೊಳ್ಳುತ್ತದೆ ಎಂದು ನಾವು ಆಶಿಸಿದ್ದೇವೆ ಎಂದರು.





