ನಗರಸಭೆಯ ಅಧ್ಯಕ್ಷರಿಂದ ದಲಿತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ- ಸೇಸಪ್ಪ ಬೆದ್ರಕಾಡು ಪ್ರತಿಕ್ರಿಯೆ
ಪುತ್ತೂರು, ಜ.21 : ಗುರುಂಪುನಾರ್-ಮೂವಪ್ಪು ರಸ್ತೆ ಬೇಡಿಕೆ ದಲಿತರಿಗೋಸ್ಕರ ಎಂದು ದಲಿತ್ ಸೇವಾ ಸಮಿತಿ ಹೋರಾಟ ಮಾಡಿಲ್ಲ. ಬೇರೆ-ಬೇರೆ ಇಲಾಖೆಗಳಿಗೆ ಸಲ್ಲಿಸಿದ ಮನವಿಯಲ್ಲಿಯು ಸಾರ್ವಜನಿಕರ ಅನುಕೂಲಕ್ಕಾಗಿ ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದೇವೆ. ಆದರೆ ನಗರಸಭೆ ಅಧ್ಯಕ್ಷರು ಮತ್ತು ಸ್ಥಳೀಯ ಕೆಲವರೂ ರಸ್ತೆ ಬೇಡಿಕೆ ಹೋರಾಟವನ್ನು ದಲಿತರಿಗೋಸ್ಕರ ಎಂದು ಬಿಂಬಿಸಿ, ಅಲ್ಲಿ ದಲಿತ ಮನೆಗಳೆ ಇಲ್ಲ ಎಂದೂ ಹೇಳಿಕೆ ನೀಡಿರುವುದು ಹೋರಾಟದ ದಾರಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ , ರಸ್ತೆ ಬೇಡಿಕೆ ನಿರ್ಮಾಣದ ಸ್ಥಳದಲ್ಲಿ ದಲಿತರಿಲ್ಲ ಎಂಬ ನಗರಸಭಾ ಅಧ್ಯಕ್ಷರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಲಿತರೂ ಸೇರಿದಂತೆ ಎಲ್ಲ ಸಮುದಾಯದವರ ಮನೆಗಳಿಗೆ ರಸ್ತೆ ಬೇಕು ಎನ್ನುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ. ಪ್ರತಿಭಟನೆ ಸಭೆ ದಲಿತ್ ಸೇವಾ ಸಮಿತಿ ಮೂಲಕ ನಡೆದಿದ್ದು, ಅದರಲ್ಲಿ ಆ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕೂಡಲೇ ಅದು ದಲಿತರ ಬೇಡಿಕೆಯ ಉದ್ದೇಶಕೋಸ್ಕರ ರಸ್ತೆ ನಿರ್ಮಾಣ ಎಂದಾಗುವುದಿಲ್ಲ. ಈ ಕಾಲು ದಾರಿಯಲ್ಲಿ ದಲಿತರ ಮಕ್ಕಳು ಸೇರಿದಂತೆ ನೂರಾರು ಮಂದಿ ಸಂಚರಿಸುತ್ತಾರೆ. ಹಾಗಾಗಿ ಎಲ್ಲರಿಗೋಸ್ಕರ ನಮ್ಮ ಹೋರಾಟ ಎಂದು ಹೇಳಿದರು.
ದಲಿತರು ಇದ್ದರೆ ರಸ್ತೆ ನಿರ್ಮಿಸಿಕೊಡಬಹುದಿತ್ತು ಎಂಬ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಹೇಳಿಕೆ ಅಚ್ಚರಿ ತಂದಿದೆ. ನಗರಸಭೆ ಅಧ್ಯಕ್ಷರು ಕೇವಲ ದಲಿತರಿಗೆ ಮಾತ್ರ ಪ್ರತಿನಿ ಅಲ್ಲ. ಅವರಿಗೆ ಎಲ್ಲ ವರ್ಗದವರು ಮತ ನೀಡಿದ್ದಾರೆ. ರಸ್ತೆ ಸೇರಿದಂತೆ ಮೂಲಭೂತ ಅಗತ್ಯತೆ ಎಲ್ಲ ವರ್ಗದ ಜನರಿಗೆ ಇರುತ್ತದೆ ಎಂಬ ಜ್ಞಾನ ಅಧ್ಯಕ್ಷರಿಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಚಂದ್ರಶೇಖರ್ ಭಟ್ ಅವರ ಜಾಗದ ಬಗ್ಗೆಯು, ನಮ್ಮ ಹೋರಾಟಕ್ಕೂ ಯಾವುದೇ ಸಂಬಂಧ ಇಲ್ಲ. ಡೀಲ್ ಕುದುರಿಸಿ ಎಂಬ ಆರೋಪ ನಿರಾಧರ. ರಸ್ತೆಗಾಗಿ ಸ್ಥಳೀಯರು ಮನವಿ ಸಲ್ಲಿಸಿದ ಕಾರಣ ಹೋರಾಟಕ್ಕೆ ಇಳಿದಿದ್ದೇವೆ. ಮೂರು ಮನೆಗಳಿಗೆ ರಸ್ತೆ ಇಲ್ಲ ಎಂಬ ಸ್ಥಳೀಯರ ಹೇಳಿಕೆ ಸುಳ್ಳು. ಅಲ್ಲಿ ಶಿವರಾಮ ಆಚಾರ್ಯ, ಚಂದ್ರಶೇಖರ ಭಟ್, ವೆಂಕಪ್ಪ ಪೂಜಾರಿ, ಬಾಬು ಪೂಜಾರಿ, ಶಿವಪ್ಪ ಪೂಜಾರಿ, ಬೇಬಿ ಪೂಜಾರಿ, ಶೇಖರ, ಭರತ್ ಸಫಲ್ಯ, ರಾಮಣ್ಣ ಗೌಡ, ಚಂದ್ರಶೇಖರ ಮೊದಲಾದವರ ಮನೆಗೆ ರಸ್ತೆ ಇಲ್ಲ. ಅವರೂ ರಸ್ತೆ ಬೇಕೆಂದೂ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷರೂ ರಸ್ತೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನಗರಸಭೆ ಪ್ರತಿನಿಗಳು ಸ್ಥಳೀಯ ಪರಿಸರದಲ್ಲಿ ಭೇಟಿ ನೀಡಿದ ಸಂದರ್ಭ ಎಲ್ಲರ ಮನೆಗೆ ಹೋಗಿ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ ಅಲ್ಲಿ ರಸ್ತೆ ಬೇಕಾಗಿದ್ದ ಮನೆಗಳಿಗೆ ಭೇಟಿ ನೀಡಿಲ್ಲ. ಕೆಲವರ ಅಭಿಪ್ರಾಯ ಆಧರಿಸಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ತಾಲೂಕು ಸಮಿತಿ ಅಧ್ಯಕ್ಷ ಗಿರಿಧರ್ ನಾಯ್ಕ ಮಾತನಾಡಿ, ಗುರುಂಪುನಾರಿನಲ್ಲಿ ರಸ್ತೆ ನಿರ್ಮಾಣದ ಸ್ಥಳದಲ್ಲಿ ಈ ಹಿಂದೆ ಇದ್ದ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ. ರಸ್ತೆಗೆ ವಿರೋಸುತ್ತಿರುವ ವ್ಯಕ್ತಿಗೆ 2013 ರಲ್ಲಿ 14 ಸೆಂಟ್ಸ್ ಅಕ್ರಮ-ಸಕ್ರಮದಡಿ ಮಂಜೂರಾಗಿದೆ. ಮಂಜೂರು ಮಾಡುವ ಮುನ್ನ ಕಂದಾಯ ಇಲಾಖೆಗೆ ಅಲ್ಲಿ ಕಾಲು ರಸ್ತೆ ಇರುವ ಮಾಹಿತಿ ಇತ್ತು. ಆದರೂ ರಸ್ತೆಗೆ ಜಾಗ ಬಿಡದೆ ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿದರು.







