ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ತ.ನಾ.ರಾಜ್ಯಪಾಲರ ಅಂಕಿತ

ಚೆನ್ನೈ,ಜ.21: ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರು ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿ ಶನಿವಾರ ಸುಗ್ರೀವಾಜ್ಞೆಯನ್ನು ಹೊರಡಿಸಿದರು.
ಜಲ್ಲಿಕಟ್ಟು ನಡೆಸಲು ಸಾಧ್ಯವಾಗುವಂತೆ ಪ್ರಾಣಿಗಳಿಗೆ ಕ್ರೌರ್ಯ ತಡೆ ಕಾಯ್ದೆ,1960ಕ್ಕೆ ತಿದ್ದುಪಡಿ ತರಲು ರಾಜ್ಯವು ಸಿದ್ಧಗೊಳಿಸಿದ್ದ ಕರಡು ಸುಗ್ರೀವಾಜ್ಞೆಯನ್ನು ಕೇಂದ್ರ ಸರಕಾರವು ಶುಕ್ರವಾರ ರಾತ್ರಿ ಅನುಮೋದಿಸಿತ್ತು.
ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಗೆ ಇಂದು ರಾಜ್ಯಪಾಲರ ಅಂಕಿತವನ್ನು ಪಡೆದುಕೊಳ್ಳಲಾಗಿದ್ದು, ಇದಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಒಪ್ಪಿಗೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ತಿಳಿಸಿದರು.
ತಮಿಳುನಾಡು ಸರಕಾರವು ಸುಗ್ರೀವಾಜ್ಞೆಯನ್ನು ಘೋಷಿಸಿದೆ ಮತ್ತು ಜಲ್ಲಿಕಟ್ಟು ಕ್ರೀಡೆಯನ್ನು ರಾಜ್ಯಾದ್ಯಂತ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸಾಂಪ್ರದಾಯಿಕ ವೈಭವದೊಂದಿಗೆ ನಡೆಸಲಾಗುವುದು ಎಂದು ಸೆಲ್ವಂ ಹೇಳಿದರು.
ರವಿವಾರ ಬೆಳಿಗ್ಗೆ ಮದುರೈ ಸಮೀಪದ ಅಳಂಗಾನಲ್ಲೂರಿನಲ್ಲಿ ನಡೆಯಲಿರುವ ಜಲ್ಲಿಕಟ್ಟು ಕ್ರೀಡೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇತರ ಜಿಲ್ಲೆಗಳಲ್ಲಿ ಸ್ಥಳೀಯ ಸಚಿವರು ಕ್ರೀಡೆಯನ್ನು ಉದ್ಘಾಟಿಸಲಿದ್ದಾರೆ.
ರಾಜ್ಯ ಸರಕಾರವು ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಸೋಮವಾರ ಸುಗ್ರೀವಾಜ್ಞೆ ಸ್ಥಾನದಲ್ಲಿ ಮಸೂದೆಯೊಂದನ್ನು ಮಂಡಿಸಲಿದೆ ಎಂದೂ ಸೆಲ್ವಂ ತಿಳಿಸಿದರು.
ಸುಗ್ರೀವಾಜ್ಞೆ ಘೋಷಣೆಯ ಬೆನ್ನಿಗೇ ಸೆಲ್ವಂ ಅವರು, ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ನೆರವಾಗಿದ್ದಕ್ಕಾಗಿ ಸರಕಾರ ಮತ್ತು ರಾಜ್ಯದ ಜನತೆಯ ಕೃತಜ್ಞತೆಗಳನ್ನು ಸೂಚಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ರವಾನಿಸಿದರು.







