varthabharati.in ಪ್ರಥಮ ವರ್ಷಾಚರಣೆಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಮಂಗಳೂರು, ಜ.21: varthabharati.in ಇದರ ಪ್ರಥಮ ವಾರ್ಷಿಕ ಸಂಭ್ರಮದಲ್ಲಿ ಎಕ್ಸೆಲ್‌ಶಿಯರ್ ನಿಸಾನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಓದುಗರಿಗಾಗಿ ಆಯೋಜಿಸಿದ್ದ ವೆಬ್‌ಸೈಟ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಶನಿವಾರ ಕೂಳೂರಿನಲ್ಲಿರುವ ಎಕ್ಸೆಲ್‌ಶಿಯರ್ ನಿಸಾನ್ ಶೋ ರೂಂನಲ್ಲಿ ಜರಗಿತು.
ಶೋರೂಂನ ಜನರಲ್ ಮ್ಯಾನೇಜರ್ ಜಾಕ್ಸನ್ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಪ್ಯಾನಸೋನಿಕ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ದೀಕ್ಷಿತ್ ಕೆ. ಸುಬ್ರಮಣ್ಯ ಪ್ರಥಮ, ಮಂಗಳೂರು ವಿವಿ ಕಾಲೇಜಿನ ಬಿ.ಎ. ವಿದ್ಯಾರ್ಥಿ ಮುಹಮ್ಮದ್ ಖಲಂದರ್ ಶಾಫಿ ಅಡ್ಡೂರು ದ್ವಿತೀಯ ಹಾಗೂ ಶ್ರೀನಿವಾಸ್ ತಾಂತ್ರಿಕ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಅಹ್ಮದ್ ಕಬೀರ್ ಕಲ್ಲಡ್ಕ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಬಹುಮಾನಗಳನ್ನು ವಿತರಿಸಿ ಮಾತನಾಡಿದ ಜಾಕ್ಸನ್, ಎರಡನೆ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ವಾರ್ತಾಭಾರತಿ ವೆಬ್‌ಸೈಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಇನ್ನೂ ಹೆಚ್ಚಿನ ಓದುಗರನ್ನು ತಲುಪಲಿ ಎಂದು ಶುಭ ಹಾರೈಸಿದರು. ಓದುಗರಿಗೆ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಥೆಗೆ ಅವಕಾಶವೊಂದನ್ನು ಕಲ್ಪಿಸಿರುವುದಕ್ಕೆ ಸಂತೋಷವಾಗಿದೆ. ನಮಗೆ ನೀಡಿರುವ ಪ್ರೋತ್ಸಾಹಕ್ಕೆ ವಾರ್ತಾಭಾರತಿ ವೆಬ್‌ಸೈಟ್ ಬಳಗಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪ್ರಥಮ ಬಹುಮಾನ ಪಡೆದ ದೀಕ್ಷಿತ್ ಕೆ. ಮಾತನಾಡಿ, ‘ವಾರ್ತಾಭಾರತಿ’ ವೆಬ್‌ಸೈಟ್‌ನಲ್ಲಿ ಕ್ಷಣಕ್ಷಣದ ಸುದ್ದಿಗಳನ್ನು ಗಮನಿಸುತ್ತಿದ್ದೇನೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ವಾರ್ತಾಭಾರತಿ ಆ್ಯಪ್‌ನ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಪ್ರಯಾಣದಲ್ಲಿರುವ ಸಂದರ್ಭದಲ್ಲಿ ವಾರ್ತಾಭಾರತಿ ಆ್ಯಪ್ ಮೂಲಕ ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಓದುತ್ತಿದ್ದೇನೆ ಎಂದರು.
ಮುಹಮ್ಮದ್ ಖಲಂದರ್ ಶಾಫಿ ಮಾತನಾಡಿ, ವಾರ್ತಾಭಾರತಿ ವೆಬ್‌ಸೈಟ್‌ನ ಸುದ್ದಿಗಳನ್ನು ನಿತ್ಯ ಓದುತ್ತಿದ್ದೇನೆ. ಗಲ್ಫ್ ರಾಷ್ಟ್ರದಲ್ಲಿ ನನ್ನ ಸ್ನೇಹಿತರು ಕೂಡ ವಾರ್ತಾಭಾರತಿಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ಷಣ ಕ್ಷಣಗಳಲ್ಲಿ ಅಪ್‌ಡೇಟ್ ಆಗುತ್ತಿರುವ ‘ವಾರ್ತಾಭಾರತಿ’ ಸುದ್ದಿಗಳು ಗ್ರಾಮ ಗ್ರಾಮಗಳಿಗೆ ತಲುಪಲಿ ಎಂದು ಹಾರೈಸಿದರು.
ಆ್ಯಡ್ ಸಿಂಡಿಕೇಟ್ ಜಾಹೀರಾತು ಏಜೆನ್ಸಿಯ ಮಂಗಳೂರು ಮುಖ್ಯಸ್ಥ ನಾಗೇಶ್ ಶೆಣೈ, ವಾರ್ತಾಭಾರತಿ ಮಂಗಳೂರು ನ್ಯೂಸ್ ಬ್ಯೂರೊ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.







