ಬಿಜೆಪಿ ಗೆದ್ದರೆ ಮೀಸಲಾತಿ ಅಂತ್ಯ ಖಂಡಿತ: ಮಾಯಾವತಿ

ಲಕ್ನೊ, ಜ.21: ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಗೆಲುವಾದರೆ, ಇದು ಮೋದಿ ಸರಕಾರಕ್ಕೆ ಮೀಸಲಾತಿ ಮುಗಿಸಿಬಿಡಲು ದೊರಕುವ ಉತ್ತೇಜನವಾಗಲಿದೆ ಎಂದು ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಮೀಸಲಾತಿ ನಿಯಮದ ಬಗ್ಗೆ ಪುನರಾವಲೋಕನ ಅಗತ್ಯ ಎಂಬ ಆರ್‌ಎಸ್‌ಎಸ್ ಮುಖಂಡ ಮನಮೋಹನ್ ವೈದ್ಯ ಹೇಳಿಕೆಯನ್ನು ಉಲ್ಲೇಖಿಸಿದ ಮಾಯಾವತಿ, ಉತ್ತರಪ್ರದೇಶದಲ್ಲಿ ಬಿಜೆಪಿಗೆ ಗೆಲುವಾದರೆ ಮೀಸಲಾತಿ ಅಂತ್ಯಗೊಳ್ಳುವುದು ಖಚಿತ. ಆದ್ದರಿಂದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗದವರು ಬಿಜೆಪಿಗೆ ಮರೆಯಲಾಗದ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಉತ್ತರಪ್ರದೇಶ ವಿಧಾನಸಭೆಯಲ್ಲಿ ಅಧಿಕಾರ ಪಡೆಯಲು ದಲಿತರ ಮತ್ತು ಮುಸ್ಲಿಮರ ಒಲವನ್ನು ಸಂಪಾದಿಸಿ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿರುವ ಮಾಯಾವತಿ, ಸಮಾಜವಾದಿ ಪಕ್ಷಕ್ಕೆ ಮತ ಹಾಕಿ ತಮ್ಮ ಅಮೂಲ್ಯವಾದ ಮತವನ್ನು ಹಾಳು ಮಾಡಬೇಡಿ. ಬಿಎಸ್‌ಪಿ ಪಕ್ಷವೊಂದೇ ರಾಜ್ಯದಲ್ಲಿ ಬಿಜೆಪಿಯ ಬಲವರ್ಧನೆಗೆ ತಡೆಯೊಡ್ಡಲು ಸಮರ್ಥ ಎಂದು ಹೇಳಿದರು.
ಮೀಸಲಾತಿಯನ್ನು ಮೂಲೆಗುಂಪು ಮಾಡುವ ‘ಬೆದರಿಕೆ’ ಒಡ್ಡುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಎಚ್ಚರಿಕೆ ನೀಡಿದ ಅವರು, ಇಂತಹ ಹೇಳಿಕೆಗಳು ಕೇಸರಿ ಸಂಘಟನೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ದ್ವಿಮುಖದ ಪ್ರತೀಕವಾಗಿದೆ ಎಂದರು.
ಬಿಹಾರದಲ್ಲಿ ನಡೆದಂತೆ ಅವರಿಗೆ(ಬಿಜೆಪಿ) ಉತ್ತರಪ್ರದೇಶದಲ್ಲೂ ಸರಿಯಾದ ಪಾಠ ಕಲಿಸಬೇಕಾದ ಅನಿವಾರ್ಯತೆಯಿದೆ. ಈ ಮೂಲಕ ಮೀಸಲಾತಿ ಮುಗಿಸಿಬಿಡುತ್ತೇವೆ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ಬಾಯಿ ಮುಚ್ಚಿಸಬೇಕು ಎಂದು ಅವರಿಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಯಾವುದೇ ಸರಕಾರ, ವಿಶೇಷವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮೋದಿ ಸರಕಾರ ಈ ಕುರಿತ ಕಾಯ್ದೆ ಜಾರಿಗೊಳಿಸಿದರೆ ಇವರು ರಾಜಕಾರಣವನ್ನೇ ಮರೆತುಬಿಡುವಂತೆ ಜನರು ಪಾಠ ಕಲಿಸುತ್ತಾರೆ .
ಸಂವಿಧಾನ ದತ್ತವಾಗಿ ಒದಗಿ ಬಂದಿರುವ ಮೀಸಲಾತಿ ಅವಕಾಶವನ್ನು ಇಲ್ಲವಾಗಿಸುತ್ತೇವೆ ಎಂದು ಬೆದರಿಕೆ ಹಾಕುವುದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಲ್ಲಿಸಬೇಕು ಎಂದವರು ಆಗ್ರಹಿಸಿದರು. ಜಯಪುರದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮೀಸಲಾತಿ ನೀತಿಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದರು. 2015ರ ಬಿಹಾರ ವಿಧಾನಸಭೆಗೂ ಮೊದಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದೇ ರೀತಿಯ ಹೇಳಿಕೆ ನೀಡಿದ್ದು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಕಾರಣವಾಗಿತ್ತು ಎನ್ನಲಾಗಿದೆ.







