‘ಕರಾವಳಿ ಸಮಸ್ಯೆಗಳು-ಪರಿಹಾರ ಮಾಧ್ಯಮಗಳ ಪಾತ್ರ’ ವಿಚಾರ ಸಂಕಿರಣ ಉದ್ಘಾಟನೆ

ಉಡುಪಿ, ಜ.21: ಮಾಧ್ಯಮಗಳು ಪರಿಸರ ಉಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಪರಿಸರ ಸೇರಿದಂತೆ ಕೆಲವೊಂದು ವಿಷಯದಲ್ಲಿ ಪರಿಣಿತ ಪತ್ರಕರ್ತರನ್ನು ತಯಾರಿಸುವುದು ಇಂದಿನ ಅಗತ್ಯ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪತ್ರಕರ್ತರನ್ನು ಪರಿಸರದ ವಿಚಾರದಲ್ಲಿ ಪರಿಣಿತರನ್ನಾಗಿ ಮಾಡಬೇಕಾಗಿದೆ ಎಂದು ಪರಿಸರ ತಜ್ಞ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ಎಚ್.ಸಿ.ಶರತ್‌ಚಂದ್ರ ಹೇಳಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಆಶ್ರಯದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಲಾದ ‘ಕರಾವಳಿ ಸಮಸ್ಯೆಗಳು-ಪರಿಹಾರ ಮಾಧ್ಯಮಗಳ ಪಾತ್ರ’ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಅಭಿವೃದ್ಧಿ ಹೆಸರಿನಲ್ಲಿ ನಾವು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿ ದ್ದೇವೆ. ಕೃಷಿಭೂಮಿ ವಶ, ಅರಣ್ಯ ನಾಶ ಮಾಡಿ ಕೈಗಾರಿಕರಣ ಹಾಗೂ ನಗರೀಕರಣ ಮಾಡುವುದೇ ಅಭಿವೃದ್ಧಿ ಎಂಬಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ನಿವಾರಣೆ ಮಾಡದಿದ್ದರೆ ನಮ್ಮ ಬದುಕೇ ನಾಶವಾಗುತ್ತದೆ ಎಂದು ಅವರು ತಿಳಿಸಿದರು.
ಒಂದೆಡೆ ಪಶ್ಚಿಮ ಘಟ್ಟ ಇನ್ನೊಂದೆಡೆ ಅರಬೀ ಸಮುದ್ರ ಹೊಂದಿರುವ ಕರಾವಳಿಯ ಸೂಕ್ಷ್ಮ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ಪರಿಣಾಮ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇದೀಗ ಈ ಜಿಲ್ಲೆಯಲ್ಲಿ ಸಿಹಿ ನೀರಿನ ಕೊರತೆ ಎದುರಾಗಿದೆ. ಕಾರ್ಖಾನೆಯಿಂದ 9ಪಟ್ಟು ವಾಯು ಮಾಲಿನ್ಯ ಹಾಗೂ 14ಪಟ್ಟು ಜಲಮಾಲಿನ್ಯ ಹೆಚ್ಚಾಗಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಅತಿ ಮಲೀನ ಪ್ರದೇಶಗಳ ಪಟ್ಟಿಯಲ್ಲಿ ಕರಾವಳಿಯ ಅರಬೀ ಸಮುದ್ರವೂ ಒಂದಾಗಿದೆ. ಈ ಬಗ್ಗೆ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದರು.
ಕೈಗಾರಿಕೆ ಹಾಗೂ ವಾಹನಗಳ ಕಲುಷಿತ ಗಾಳಿಯಿಂದಾಗಿ ಪಶ್ಚಿಮಘಟ್ಟದ ಅರಣ್ಯ ಸಂಪತ್ತು ನಾಶವಾಗುತ್ತಿವೆ. ಇದರಿಂದ ಮಳೆಯ ಪ್ರಮಾಣ ಇಳಿ ಮುಖವಾಗಿ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗುತ್ತಿದೆ ಎಂದ ಅವರು, ಪರಿಸರ ಉಳಿಸುವ ನಿಟ್ಟಿನಲ್ಲಿ ಅನೇಕ ಇಲಾಖೆ ಹಾಗೂ ಕಾನೂನುಗಳಿದ್ದರೂ ಪರಿಸರ ಹಾನಿ ಹೆಚ್ಚು ಹೆಚ್ಚು ಆಗುತ್ತಲೇ ಇದೆ. ಈ ಬಗ್ಗೆ ವಿಶ್ಲೇಷಣೆ ಮಾಡ ಬೇಕಾಗಿದೆ. ಇದರಲ್ಲಿ ಮಾಧ್ಯಮದ ಪಾತ್ರ ಅತಿ ಮುಖ್ಯ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕ ಟೇಶ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ, ಪರಿಸರ ಮತ್ತು ಮತ್ಸ ಸಂಪತ್ತು ನಾಶ ಸೇರಿದಂತೆ ಹಲವು ನೈಸರ್ಗಿಕ ಹಾಗೂ ವಲಸೆ ಕಾರ್ಮಿಕ ಶಿಕ್ಷಣ, ವಸತಿ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳನ್ನು ಸರಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರು ವಲ್ಲಿ ಮಾಧ್ಯಮದ ಪಾತ್ರ ಪ್ರಮುಖ ಎಂದು ತಿಳಿಸಿದರು.
ಮಾಧ್ಯಮ ಇಲ್ಲದಿದ್ದರೆ ಎಲ್ಲ ಸಮಸ್ಯೆಗಳು ಪರಿಹಾರ ಕಾಣದೆ ಅಲ್ಲೇ ಉಳಿದುಕೊಳ್ಳುತ್ತವೆ. ಸಮಸ್ಯೆಗಳು ಸರಕಾರದ ಗಮನಕ್ಕೆ ಬಂದರೆ ಮಾತ್ರ ಪರಿಹಾರ ದೊರೆಯಲು ಸಾಧ್ಯ. ಮಾಧ್ಯಮಗಳು ಕೆಟ್ಟ ಸುದ್ದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡದೆ, ಅಭಿವೃದ್ಧಿ ಶೀಲ ಹಾಗೂ ಸಮಾಜಮುಖಿ ವರದಿ ಗಳಿಗೆ ಆದ್ಯತೆ ನೀಡಬೇಕು ಎಂದರು. ಸಂಘದ ಅಧ್ಯಕ್ಷ ಜಯಕರ ಸುವರ್ಣ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ, ಸದಸ್ಯರಾದ ವೆಂಕಟ ಸಿಂಗ್, ಮುತ್ತು ನಾಯಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ರೋಹಿಣಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು ವಂದಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಗೋಷ್ಠಿಯಲ್ಲಿ ಉದಯವಾಣಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ ‘ಕರಾವಳಿ ಅಭಿವೃದ್ಧಿ ಸಮಸ್ಯೆಗಳ ಕುರಿತು ಮಾಧ್ಯಮಗಳ ಪಾತ್ರ’ ಮತ್ತು ಕರಾವಳಿ ಮುಂಜಾಲು ಸಂಪಾದಕ ಗಂಗಾಧರ ಹಿರೇಗುತ್ತಿ ‘ಮತ್ಸೋ ದಮ: ಸಮಸ್ಯೆ- ಸವಾಲು’ ಎಂಬ ವಿಷಯದ ಕುರಿತು ಮಾತನಾಡಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಶಿಷ್ಯವೇತನ
ಅಕಾಡೆಮಿ ವತಿಯಿಂದ ಬಿಜಾಪುರದಲ್ಲಿ ರಾಜ್ಯಮಟ್ಟದ ಮಹಿಳಾ ಪತ್ರಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 10ಸಾವಿರ ರೂ. ಶಿಷ್ಯವೇತನವನ್ನು ನೀಡಿ 10ತಿಂಗಳ ಕಾಲ ತರಬೇತಿ ನೀಡಲಾಗುವುದು. ಶಿಷ್ಯವೇತನದ ಸಂಖ್ಯೆಯನ್ನು ಈಗಿನ 10ರಿಂದ 25 ಮಂದಿಗೆ ಏರಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ತಿಳಿಸಿದರು.
ಪತ್ರಕರ್ತರಿಂದ ಯಕ್ಷರೂಪಕ, ನಾಟಕ
ಕಾರ್ಯಾಗಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಪತ್ರಕರ್ತ ನಾಗರಾಜ್ ರಾವ್ ವರ್ಕಾಡಿ ನಿರ್ದೇಶನದ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ಹಾಸ್ಯನಾಟಕ ಮತ್ತು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ‘ನಳ ಕಾರ್ಕೋಟಕ’ ಯಕ್ಷ ರೂಪಕವನ್ನು ಪ್ರದರ್ಶಿಸಿದರು. ಪತ್ರಕರ್ತ ಹರ್ಷರಾಜ್ ಕೋಡಿಕನ್ಯಾಣ ಚಿತ್ರಗೀತೆಯನ್ನು ಹಾಡಿ ರಂಜಿಸಿ ದರು.







