ಉಡುಪಿ ಸ್ವಚ್ಛತೆ ಹೊಣೆ ನಮ್ಮೆಲ್ಲರದು: ಶ್ರೀವಿಶ್ವಪ್ರಸನ್ನತೀರ್ಥ

ಉಡುಪಿ, ಜ.21: ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಮ್ಮಿಕೊಂಡಿರುವ ‘ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ’ ಎಂಬ ಕಾರ್ಯಕ್ರಮಗಳಿಗೆ ಪೂರಕವಾಗಿ ಶನಿವಾರ ಉಡುಪಿ ಶ್ರೀಕೃಷ್ಣನ ಮಠದ ಆಸುಪಾಸಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ಒಕ್ಕೂಟದ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9ರಿಂದ ಅಪರಾಹ್ನ 1ಗಂಟೆವರೆಗೆ ನಡೆದ ಶ್ರಮದಾನಕ್ಕೆ ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥರು ಚಾಲನೆ ನೀಡಿದರು. ಯೋಜನೆಯ ಸುಮಾರು 150ಕ್ಕೂ ಅಧಿಕ ಸದಸ್ಯರು ರಾಜಾಂಗಣ ಪ್ರದೇಶ, ವಾಹನ ನಿಲುಗಡೆ ಪ್ರದೇಶ, ರಥಬೀದಿ, ಮುಕುಂದ ಕೃಪಾ ಶಾಲಾ ಮಾರ್ಗ, ವಾದಿರಾಜ ರಸ್ತೆ, ಅತಿಥಿಗೃಹಗಳ ಆವರಣಗಳನ್ನು ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ತಾಲೂಕು ನಿರ್ದೇಶಕಿ ಮಾಲತಿ ದಿನೇಶ್, ತಾಲೂಕು ಯೋಜನಾಧಿಕಾರಿ ಉಮಾ ಎಂ.ಸಿ, ಮೋಹಿನಿ ಎಸ್. ಗೌಡ, ಜ್ಯೋತಿ ಶೆಟ್ಟಿ, ಪ್ರೇಮ್ ಪ್ರಸಾದ್ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.





