ಮಂಗಳೂರು: ಸ್ವ-ಉದ್ಯೋಗ ಪ್ರೇರಣಾ ಶಿಬಿರ

ಮಂಗಳೂರು, ಜ.21: ದ.ಕ ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್, ಜಮೀಯ್ಯತುಲ್ ಫಲಾಹ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಮೂಡುಬಿದಿರೆ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವುಗಳ ಜಂಟಿ ಆಶ್ರಯದಲ್ಲಿ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ಜಮೀಯ್ಯತುಲ್ ಫಲಾಹ್ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಾಗಾರದವನ್ನು ಶಾಸಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು. ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ಕೆಎಂಡಿಸಿ ವ್ಯವಸ್ಥಾಪಕ ಮುಹಮ್ಮದ್ ಸಫ್ವಾನ್, ಮೂಡುಬಿದಿರೆ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಅಬ್ದುಲ್ ರವೂಫ್, ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಸಿ.ಎ.ಝಮೀರ್ ಅಂಬರ್, ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಸದುಲ್ಲಾ ಇಸ್ಮಾಯಿಲ್, ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಘಟಕಾಧ್ಯಕ್ಷ ಗಫೂರ್ ಸಾಹೇಬ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಣ್ಣ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುಂದರ್ ಎಸ್.ಎಂ ಅಲ್ಪಸಂಖ್ಯಾತರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಹಾಗೂ ಸ್ವ-ಉದ್ಯೋಗದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಶಹೀದ್ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.





