ಸಮುದ್ರದಲ್ಲಿ ಶಿವಾಜಿ ಸ್ಮಾರಕ ಸ್ಥಾಪನೆಗೆ ಬಿಡೆವು:ಮಹಾರಾಷ್ಟ್ರ ಮೀನುಗಾರರ ಸಂಘಟನೆ
ಮುಂಬೈ, ಜ.21: ರೂ. 3,600 ಕೋಟಿ ವೆಚ್ಚದ ಶಿವಾಜಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವಾರಗಳ ನಂತರ ಅಖಿಲ್ ಮಹಾರಾಷ್ಟ್ರ ಮಚ್ಚಿಮಾರ್ ಕೃತಿ ಸಮಿತಿ ಹೇಳಿಕೆಯೊಂದನ್ನು ನೀಡಿ ಮುಂಬರುವ ಮುಂಬೈ ಹಾಗೂ ಇತರ ಸ್ಥಳೀಯಾಡಳಿತಗಳ ಚುನಾವಣೆಯಲ್ಲಿ ಮೀನುಗಾರರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಘೋಷಿಸಿದೆ. ಫೆಬ್ರವರಿ 21ರಂದು ಬಿಎಂಸಿ, 25 ಜಿಲ್ಲಾ ಪರಿಷದ್ ಗಳು ಹಾಗೂ 283 ಪಂಚಾಯತ್ ಸಮಿತಿಗಳಿಗೆ ಚುನಾವಣೆಗಳು ನಡೆಯಲಿವೆ. ‘‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರು ಭೂಮಿಪುತ್ರನಿಗೆ ಅವಮಾನ ಮಾಡಿದ್ದಾರೆ.
ಕೇವಲ ಭೂಮಿಪೂಜೆಗೆ ರೂ. 25 ಕೋಟಿ ವಿನಿಯೋಗಿಸಲಾಗಿದೆ. ನಾವು ಈ ಸ್ಮಾರಕ ತಲೆಯೆತ್ತಲು ಬಿಡುವುದಿಲ್ಲ. ನಾವು ಕೇವಲ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮತ ನೀಡುತ್ತೇವೆ,’’ಎಂದು ಸಮಿತಿ ಅಧ್ಯಕ್ಷ ದಾಮೋದರ್ ತಾಂಡೆಲ್ ಹೇಳಿದ್ದಾರೆ. ಇತರ ಹಿಂದುಳಿದ ವರ್ಗಗಳು ಜತೆಯಾಗಿ ಜನವರಿ 26ರಂದು ತಮ್ಮದೇ ರಾಜಕೀಯ ಪಕ್ಷವಾದ ಬಹುಜನ್ ಒಬಿಸಿ ಸಂಘರ್ಷ ಸೇನಾ ಸ್ಥಾಪಿಸುವುದಾಗಿಯೂ ಅವರು ತಿಳಿಸಿದರು. ಮೀನುಗಾರರು ಈ ಸ್ಮಾರಕ ಯೋಜನೆಯ ವಿರೋಧಿಗಳಲ್ಲ. ಬದಲಾಗಿ ಸ್ಮಾರಕ ನಿರ್ಮಿಸಲುದ್ದೇಶಿಸಲಾಗಿರುವ ಸ್ಥಳಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೀನುಗಳು ಮರಿಯಿಡುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗುವುದರಿಂದ ಮೀನು ಸಂತತಿಗೆ ಅಪಾಯವಿದೆಯೆಮದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸ್ಮಾರಕ ಮೇಲೇಳಲಿರುವ ಪ್ರದೇಶದಲ್ಲಿ ಸುಮಾರು 40 ಜಾತಿಯ ಏಡಿಗಳು, ಚಿಪ್ಪು ಮೀನು ಹಾಗೂ ಇತರ ಜಲಚರಗಳಿವೆ. ಸ್ಮಾರಕ ತಲೆಯೆತ್ತಿದ್ದೇ ಆದಲ್ಲಿ ಇವುಗಳೆಲ್ಲವೂ ನಾಶಗೊಳ್ಳುವವು,’’ ಎಂದು ತಾಂಡೆಲ್ ಹೇಳಿದ್ದಾರೆ.







