ದೇವಸ್ಥಾನದ ಕಾರ್ಯಕ್ರಮದ ನೆಪ: ಮದುವೆಯನ್ನು ಬಲಾತ್ಕಾರವಾಗಿ ಸ್ಥಳಾಂತರ ಮಾಡಿಸಿದ ಬಜರಂಗ ದಳ
ಉಡುಪಿ, ಜ.22: ಹೂಡೆ ಸಮಿಪದ ಕೋಡಿಬೇಂಗ್ರೆಯ ಯಾಸೀನ್ ಎಂಬವರ ಮದುವೆಯನ್ನು ಸ್ಥಳೀಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ನೆಪವೊಡ್ಡಿ ಬಜರಂಗ ದಳ ಕಾರ್ಯಕರ್ತರು ಬಲಾತ್ಕಾರವಾಗಿ ಸ್ಥಳಾಂತರ ಮಾಡಿರುವ ಘಟನೆ ಇಂದು ನಡೆದಿದೆ.
ಯಾಸೀನ್ ಕೋಂಡಿಬೇಂಗ್ರೆ ಎಂಬವರ ಮದುವೆ ಇಂದು ಅವರ ಮನೆಯಲ್ಲಿ ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸುಮಾರು 200ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಮದುವೆಗೆ ಹೋಗುವ ದಾರಿಯನ್ನು ಬಲಾತ್ಕಾರವಾಗಿ ಮುಚ್ಚಿದ್ದರು.. ಈ ಬಗ್ಗೆ ಯಾಸೀನ್ ಮನೆಯವರು ಕೇಳಿದಾಗ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುವುದರಿಂದ ಮೂರು ದಿನಗಳ ಕಾಲ ಯಾರು ಮಾಂಸ ಸೇವಿಸುವಂತಿಲ್ಲ ಎಂದು ಬಿಗಿಪಟ್ಟು ಹಿಡಿದರು. ಈ ಸಂದರ್ಭ ವಾಗ್ವಾದ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮದುವೆಯು ನಿರಾತಂಕವಾಗಿ ನಡೆಯಲಿ ಎಂಬ ಉದ್ದೇಶದಿಂದ ದೇವಸ್ಥಾನದಿಂದ ಒಂದು ಕಿ.ಮೀ. ದೂರವಿದ್ದ ಮದುವೆಯನ್ನು 5ಕಿ.ಮೀ ದೂರವಿರುವ ಜದೀದ್ ಮಸೀದಿಗೆ ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಇಲ್ಲಿಯವರೆಗೆ ಸೌಹಾರ್ದಯುತವಾಗಿ ಇದ್ದ ಪ್ರದೇಶದಲ್ಲಿ ಹಿಂದೂ ಮುಸ್ಲಿಮರನ್ನು ವಿಭಜಿಸಿ ಶಾಂತಿ ಕದಡುವ ಪ್ರಯತ್ನ ಇದಾಗಿ ದೆ ಎಂದು ದೂರಿದ ಸಾರ್ವಜನಿಕರು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ರಸ್ತೆ ಮುಚ್ಚುವುದಕ್ಕೆ ಮುಸ್ಲಿಂ ಮನೆಗಳವರು ಒಪ್ಪಿಗೆ ನೀಡಿದ್ದರು ಎಂದು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.







