ಮಾಲೆಗಾಂವ್ ಸ್ಫೋಟ ಆರೋಪಿಯಿಂದ ಎರಡು ಕಡೆ ಸ್ಪರ್ಧೆ
ಉತ್ತರ ಪ್ರದೇಶ ಚುನಾವಣೆ

ಲಕ್ನೋ, ಜ.22: ಮಾಲೆಗಾಂವ್ ಸ್ಫೋಟದ ಆರೋಪಿ ಹಾಗೂ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಅವರನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಲಿಯಾದ ಬೈರಿಯಾ ಹಾಗೂ ಮೀರಠ್ ಸದರ್ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಅಖಿಲ ಭಾರತ ಹಿಂದೂ ಮಹಾಸಭಾ ನಿರ್ಧರಿಸಿದೆ.
2008ರ ಮಾಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಉಪಾಧ್ಯಾಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂಬೈನ ಎಂಕೊಕಾ ನ್ಯಾಯಾಲಯ ಅನುಮತಿ ನೀಡಿದೆ. ಕಳೆದ ವಾರ ಇವರು ನ್ಯಾಯಾಲಯ ಹಾಗೂ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಚುನಾವಣೆ ಸ್ಪರ್ಧೆಗೆ ಅನುಮತಿ ನೀಡುವಂತೆ ಕೋರಿದ್ದರು. ಇದಕ್ಕೆ ಎನ್‌ಐಎ ಅಧಿಕಾರಿಗಳು ಯಾವುದೇ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅನುಮತಿ ನೀಡಿದೆ.
ಉಪಾಧ್ಯಾಯ, ಮೂಲತಃ ಪೂರ್ವ ಉತ್ತರಪ್ರದೇಶದ ಭೈರಿಯಾ ಕ್ಷೇತ್ರ ವ್ಯಾಪ್ತಿಯ ದಲನ್ ಚಾಪ್ರ ಗ್ರಾಮದವರು. ಎಬಿಎಚ್‌ಎಂ ಇವರನ್ನು ಎರಡು ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದರೂ, ಇವರ ಒಲವು ಇರುವುದು ಬೈರಿಯಾ ಕ್ಷೇತ್ರದ ಮೇಲೆ ಮಾತ್ರ.
ಉಪಾಧ್ಯಾಯ ಇಲ್ಲಿ 14-15 ವರ್ಷ ಹಿಂದೆ ವಾಸವಿದ್ದರೂ, ಕ್ಷೇತ್ರದ ಬಗ್ಗೆ ಅರಿವು ಇಲ್ಲದಿರುವುದು ಅವರಿಗೆ ಸಮಸ್ಯೆಯಾಗಿ ಪರಿಣಮಿಸಲಿದೆ. ಪುಣೆಯಲ್ಲಿ ಕಾನೂನು ಪದವಿ ಪಡೆಯುತ್ತಿರುವ ಪುತ್ರ ವಿಶಾಲ್ ಅವರನ್ನು ಕರೆಸಿ, ತಂದೆಯ ಪ್ರಚಾರ ಜವಾಬ್ದಾರಿ ವಹಿಸಿಕೊಳ್ಳುವಂತೆ ಹಿಂದೂ ಮಹಾಸಭಾ ಈಗಾಗಲೇ ಸೂಚನೆ ನೀಡಿದೆ. ಪ್ರಚಾರ ಕಾರ್ಯಕ್ಕಾಗಿ ಫೆಬ್ರವರಿ 4ರಿಂದ ಮಾರ್ಚ್ 4ರವರೆಗೆ ಜಾಮೀನು ನೀಡುವಂತೆಯೂ ಅವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಎನ್‌ಐಎ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಕಳೆದ ವರ್ಷ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ, ಉಪಾಧ್ಯಾಯಗೆ ಮೊಕಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿತ್ತು.







