ಬಿಜೆಪಿ ಪಕ್ಷದ ಉ.ಪ್ರದೇಶ ಚುನಾವಣೆ ಪ್ರಚಾರ ಪಟ್ಟಿಯಿಂದ ಅಡ್ವಾಣಿ, ವರುಣ್ ಗಾಂಧಿಗೆ ಕೊಕ್

ಲಕ್ನೋ/ಹೊಸದಿಲ್ಲಿ, ಜ.22: ಮುಂಬರುವ ಉತ್ತರ ಪ್ರದೇಶ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಬಿಜೆಪಿ ಪಕ್ಷದ ಪರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲದೆ ಗೃಹ ಸಚಿವರಾದ ರಾಜ್‌ನಾಥ್ ಸಿಂಗ್ ಸಹಿತ ಕೇಂದ್ರದ 17 ಸಚಿವರು ಭಾಗವಹಿಸಲಿದ್ದಾರೆ. ಆದರೆ, ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ ಹಾಗೂ ಎಂ.ಎಂ. ಜೋಶಿ, ಸಂಸದ ವರುಣ್ ಗಾಂಧಿ ಅವರನ್ನು ಪ್ರಚಾರ ಪಟ್ಟಿಯಿಂದ ಹೊರಗಿಡಲಾಗಿದೆ.
ಉತ್ತಪ್ರದೇಶ ವಿಧಾನಸಭಾ ಚುನಾವಣೆ ಫೆ.11 ರಿಂದ ಆರಂಭವಾಗಿ ಮಾ.8ರ ತನಕ ನಡೆಯಲಿದೆ. ಚುನಾವಣೆ ಪ್ರಚಾರಕ್ಕೆ ತಯಾರಿ ನಡೆಸಿರುವ ಬಿಜೆಪಿ ಪ್ರಮುಖ ಚುನಾವಣಾ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದೆ.
ಬಿಜೆಪಿ ಚುನಾವಣಾ ಪ್ರಚಾರ ಪಟ್ಟಿಯಿಂದ ಹೊರಗುಳಿದಿರುವ ಪ್ರಮುಖರೆಂದರೆ ಸಲ್ತಾನ್‌ಪುರದ ಸಂಸದ ವರುಣ್ ಗಾಂಧಿ, ಕಾನ್ಪುರದ ಸಂಸದರಾಗಿರುವ ಎಂ.ಎಂ. ಜೋಶಿ ಹಾಗೂ ಇತ್ತೀಚೆಗೆ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿರುವ ಉನ್ನಾವೊ ಸಂಸದ ಸಾಕ್ಷಿ ಮಹಾರಾಜ್ ಹಾಗೂ ಆಯೋಧ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ವಿನಯ್ ಕಟಿಯಾರ್‌ಗೆ ಸ್ಥಾನ ನೀಡಲಾಗಿಲ್ಲ.
ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಪುತ್ರ ಹಾಗೂ ಲೋಕಸಭಾ ಸಂಸದ ರಾಜ್‌ವೀರ್ ಸಿಂಗ್ ಹಾಗೂ ದಿಲ್ಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಉತ್ತರ ಪ್ರದೇಶ ಪೂರ್ವ ಭಾಗದಲ್ಲಿ ಜನಪ್ರಿಯರಾಗಿರುವ, ಗೋರಖ್‌ನಾಥ್ ದೇವಾಲಯದ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಚುನಾವಣೆ ಪ್ರಚಾರದ ಪಟ್ಟಿಯಲ್ಲಿದ್ದಾರೆ. ಭೋಜ್‌ಪುರಿ ಚಿತ್ರದ ಸ್ಟಾರ್ ನಟ, ಇತ್ತೀಚೆಗೆ ದಿಲ್ಲಿ ಬಿಜೆಪಿ ಮುಖ್ಯಸ್ಥನಾಗಿ ನೇಮಕಗೊಂಡಿರುವ ಮನೋಜ್ ತಿವಾರಿ ಉತ್ತರಪ್ರದೇಶದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳಾದ ರಾಜಸ್ಥಾನದ ವಸುಂಧರಾ ರಾಜೇ ಹಾಗೂ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.







