10ನೆ ಐಸಿವೈಎಂ ಸಮಾವೇಶದ ಜಾಥಾಕ್ಕೆ ಚಾಲನೆ

ಮಂಗಳೂರು,ಜ.22: ನಗರದಲ್ಲಿ ಜನವರಿ 18ರಿಂದ 22ರವರೆಗೆ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರಮಟ್ಟದ 10ನೆ ಕಥೊಲಿಕ್ ಯುವ ಸಮಾವೇಶದ ಜಾಥಾಕ್ಕೆ ನಗರದ ರೋಸಾರಿಯೋ ಕಥಡ್ರಲ್‌ನಿಂದ ಸಂತ ಅಲೋಶಿಯಸ್ ವರಿಗಿನ ಐಸಿವೈಎಂ ರ್ಯಾಲಿಗೆ ರವಿವಾರ ಬೆಳಗ್ಗೆ ಬೆಂಗಳೂರಿನ ಆರ್ಚ್ ಬಿಷಪ್ ಅತೀ ವಂದನೀಯ ಬರ್ನಾರ್ಡ್ ಮೊರಾಸ್ ಬಾವುಟ ಬೀಸಿ ಚಾಲನೆ ನೀಡಿದರು.
ಶಾಸಕರಾದ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಬಿಳಿ ಪಾರಿವಾಳಗಳನ್ನು ಹಾರಲು ಬಿಟ್ಟು ಜಾಥಾ ಉದ್ಘಾಟನಾ ಸಮಾರಂಭಕ್ಕೆ ಶುಭ ಕೋರಿದರು. ಎಂಟು ಸಾವಿರಕ್ಕೂ ಅಧಿಕ ಯುವಕರನ್ನೊಳಗೊಂಡ ಜಾಥಾದಲ್ಲಿ ಜಾರ್ಖಂಡ್,ಛತ್ತೀಸ್‌ಗಡ ,ಈಶಾನ್ಯ ಭಾರತದ ಯುವಕ ಯುವತಿಯರ ತಂಡ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಜಾಥಾದಲ್ಲಿ ಭಾಗವಹಿಸಿ ಮೆರಗು ನೀಡಿದರು.
ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಬಸೇಲಿಯಸ್ ಕ್ಲೀಮಿಸ್,ಏರ್ನಾಕುಲಂನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಆಲೆಂಚೆರ್ರಿ, ಫೆಡರೇಶನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮುಂಬೈ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ , ಬಿಷಪ್ ಹೆನ್ರಿ ಡಿ'ಸೋಜ ಮೊದಲಾದವರು ಜಾಥಾದಲ್ಲಿ ಉಪಸ್ಥಿತರಿದ್ದರು.
ಇಂಡಿಯನ್ ಕಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ)ಜಾಥಾವನ್ನು ಆಯೋಜಿಸಿದ್ದು ಯೂಥ್ ಕೌನ್ಸಿಲ್ ಆಫ್ ಕಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ)ಇದಕ್ಕೆ ಸಹಯೋಗ ನೀಡಿದೆ.ಈ ಸಮಾವೇಶವನ್ನು ಕರ್ನಾಟಕ ವಲಯ, ಮಂಗಳೂರು ಡಯೋಸಿಸ್, ಉಡುಪಿ, ಬೆಳ್ತಂಗಡಿ ಹಾಗೂ ಪುತ್ತೂರು ಡಯಾಸೀಸ್ ಸಂಯುಕ್ತವಾಗಿ ವ್ಯವಸ್ಥೆಗೊಳಿಸಿದೆ.







