ಉ.ಪ್ರದೇಶ ಚುನಾವಣೆ: ಎಸ್ಪಿಯೊಂದಿಗೆ ಕಾಂಗ್ರೆಸ್ ಮೈತ್ರಿ ಖಚಿತ

ಹೊಸದಿಲ್ಲಿ, ಜ.22: ಮುಂಬರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ನಡೆಸಲಿದ್ದು 105 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಹಾಗೂ ಎಸ್ಪಿ ನಡುವೆ ಸೀಟು ಹಂಚಿಕೆ ಸಂಬಂಧ ತಿಕ್ಕಾಟ ಶುರುವಾಗಿತ್ತು. ಕಾಂಗ್ರೆಸ್‌ಗೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡವುದಿಲ್ಲ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದರು. ಕಾಂಗ್ರೆಸ್ 121 ಸೀಟುಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿತ್ತು.
ಕಾಂಗ್ರೆಸ್‌ಗೆ 90 ರಿಂದ 100 ಸೀಟುಗಳನ್ನು ನೀಡಲಾಗುತ್ತದೆ ಎಂದು ಅಖಿಲೇಶ್ ಶನಿವಾರ ಖಡಕ್ಕಾಗಿ ಹೇಳಿದ್ದರು. ಅಂತಿಮವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೀಟು ಹಂಚಿಕೆ ವಿಷಯದಲ್ಲಿ ಮಧ್ಯಪ್ರದೇಶಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎನ್ನಲಾಗಿದೆ.
ಸಮಾಜವಾದಿ ಪಕ್ಷ 289 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ 105 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದೆ.
Next Story





