ಆರಂಭಗೊಳ್ಳುವ ಮುನ್ನವೇ ಅಂತ್ಯಗೊಂಡ ಬಿಜೆಪಿಗೆ ತಿವಾರಿ ಸೇರ್ಪಡೆ ಅಧ್ಯಾಯ !

ಹೊಸದಿಲ್ಲಿ,ಜ.22: ಕಾಂಗ್ರೆಸ್‌ನ ವಯೋವೃದ್ಧ ನಾಯಕ, ಉತ್ತರಾಖಂಡ-ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಆಂಧ್ರಪ್ರದೇಶದ ಮಾಜಿ ರಾಜ್ಯಪಾಲ ನಾರಾಯಣ ದತ್ ತಿವಾರಿ ಅವರು ಬಿಜೆಪಿಗೆ ಸೇರುವ ಅಧ್ಯಾಯ ಆರಂಭಗೊಳ್ಳುವ ಮೊದಲೇ ಅಂತ್ಯಗೊಂಡಿದೆ. ಅವರ ಪುತ್ರ ರೋಹಿತ್ ಶೇಖರ್‌ಗೆ ಉತ್ತರಾಖಂಡದಲ್ಲಿ ಹಲ್ದಾನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯುವ ಸಾಧ್ಯತೆಯೂ ಇತ್ತು. ಆದರೆ ಶನಿವಾರ ತಡರಾತ್ರಿ ಬಿಜೆಪಿಯು ಬಿಡುಗಡೆಗೊಳಿಸಿರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಪಟ್ಟಿಯಲ್ಲಿ ರೋಹಿತ ಶೇಖರ್ ಹೆಸರೇ ಇಲ್ಲ!
ಬುಧವಾರ ತಿವಾರಿಯವರು ತನ್ನ ಪತ್ನಿ ಉಜ್ವಲಾ ಮತ್ತು ಪುತ್ರ ರೋಹಿತ್ ಜೊತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನುಭೇಟಿಯಾಗಿದ್ದರು. ಅದರ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯ ಮಾನ ಹರಾಜಾಗತೊಡಗಿತ್ತು. ನೆಟ್ಟಿಗರು ಟೀಕಾಸ್ತ್ರಗಳ ಮೂಲಕ ಪಕ್ಷವನ್ನು ತುಂಬ,ತುಂಬ ಗೇಲಿ ಮಾಡಿದ್ದರು. 91ರ ವೃದ್ಧ ತಿವಾರಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಯುವಕರಿಗೆ ಯಾವ ಸಂದೇಶವನ್ನು ನೀಡಲು ಬಿಜೆಪಿಯು ಬಯಸುತ್ತಿದೆ ಎಂದೂ ಹಲವರು ಪ್ರಶ್ನಿಸಿದ್ದರು.
ಆದರೆ ಸಂಜೆಯಾಗುತ್ತಿದ್ದಂತೆ ಬಿಜೆಪಿಯು ತಿವಾರಿ ಪಕ್ಷಕ್ಕೆ ಸೇರಿಲ್ಲ ಮತ್ತು ಅವರ ಪುತ್ರ ಮಾತ್ರ ಸೇರ್ಪಡೆಗೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿತ್ತು. ರೋಹಿತ್‌ರನ್ನು ಹಲ್ದಾನಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದು ಎಂದೂ ಬಿಜೆಪಿ ಮೂಲಗಳು ತಿಳಿಸಿದ್ದವು. ಖುದ್ದು ತಿವಾರಿಯವರೇ ಬಿಜೆಪಿಯನ್ನು ಬೆಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದರು.
ಆದರೆ ಶನಿವಾರ ತಡರಾತ್ರಿ ಪ್ರಕಟಿಸಲಾದ ಉತ್ತರಾಖಂಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲ್ದಾನಿ ಕ್ಷೇತ್ರದಲ್ಲಿ ಜೋಗೇಂದ್ರ ರೌತೇಲಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿಯ ಎಲ್ಲ 70 ವಿಧಾನಸಭಾ ಸ್ಥಾನಗಳಿಗ ತನ್ನ ಅಭ್ಯರ್ಥಿಗಳನ್ನು ಬಿಜೆಪಿಯು ಘೋಷಿಸಿದೆ.
ತಿವಾರಿ ಸೇರ್ಪಡೆ ವಿಷಯ ಪಕ್ಷಕ್ಕೆ ಕಿರಿಕಿರಿಯುಂಟು ಮಾಡಿದ್ದರಿಂದ ಅವರನ್ನು ದೂರವೇ ಇಡಲು ಬಿಜೆಪಿಯು ನಿರ್ಧರಿಸಿದೆ ಎನ್ನಲಾಗಿದೆ.
ತಿವಾರಿಯವರ ನಡೆ ಅವರ ಪರಿವಾರದಲ್ಲಿಯೂ ಅಸಂತೋಷಕ್ಕೆ ಕಾರಣವಾಗಿದೆ. ಜೀವನವಿಡೀ ಕಾಂಗ್ರೆಸ್‌ನ ಸೇವೆ ಮಾಡಿದ ಬಳಿಕ ತಿವಾರಿಯವರು ಈ ವಯಸ್ಸಿನಲ್ಲಿ ಪಕ್ಷವನ್ನು ಬಿಡಲು ಹೇಗೆ ಸಾದ್ಯ ಎಂದೂ ಅವರ ಪರಿವಾರದ ಕೆಲವು ಸದಸ್ಯರು ಬಹಿರಂಗವಾಗಿಯೇ ಕಳವಳವನ್ನು ವ್ಯಕ್ತಪಡಿಸಿದ್ದರು.







