ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದ 31ಅಂಗವಿಕಲ ಜೋಡಿಗಳು

ಹೊಸದಿಲ್ಲಿ,ಜ.22: ಇಲ್ಲಿಯ ಸಮಾಜ ಸೇವಾ ಸಂಸ್ಥೆಯೊಂದು ರವಿವಾರ ಪಶ್ಚಿಮ ದಿಲ್ಲಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 31 ಅಂಗವಿಕಲ ಜೋಡಿಗಳು ಹಸೆಮಣೆಯನ್ನೇರಿವೆ.
ಈ ಪೈಕಿ ಹೆಚ್ಚಿನ ಯುವಕ -ಯುವತಿಯರು ಸೊಸೈಟಿಯ ಜೈಪುರ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಉಚಿತ ಅಂಗವೈಕಲ್ಯ ನಿವಾರಣೆ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಪರಸ್ಪರ ಭೇಟಿಯಾಗಿದ್ದರು ಎಂದು ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದ ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ ಅಗರವಾಲ್ ಅವರು ತಿಳಿಸಿದರು.
ಪಂಜಾಬಿ ಬಾಗ್‌ನಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹಕ್ಕಾಗಿ 51 ವಿವಾಹ ಮಂಟಪಗಳನ್ನು ಸಿದ್ಧಗೊಳಿಸಲಾಗಿತ್ತು. ಸಂಭ್ರಮ-ಸಡಗರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಧು-ವರರ ಕುಟುಂಬ ಸದಸ್ಯರು, ಬಂಧುಗಳು ಮತ್ತು ಸ್ನೇಹಿತರು ಭಾಗಿಯಾಗಿದ್ದರು.
‘ಕನ್ಯಾದಾನ ’ ಸಂದರ್ಭ ನೂತನ ದಂಪತಿಗಳಿಗೆ ಮನೆಬಳಕೆ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಲಾಯಿತು.
ರಾಜಸ್ಥಾನ,ಗುಜರಾತ್,ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳ 31 ಅಂಗವಿಕಲ ಜೋಡಿಗಳು ಸೇರಿದಂತೆ ಒಟ್ಟು 51 ಜೋಡಿಗಳ ಮದುವೆ ನಡೆಸಲಾಯಿತು.







