ಎಸ್‌ಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಅಖಿಲೇಶ್
ಮುಲಾಯಂ ಗೈರು

ಲಕ್ನೊ, ಜ.22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಸಿಂಗ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಪಕ್ಷವನ್ನು ಕಟ್ಟಿ ಬೆಳೆಸಿ ಎರಡು ದಶಕಗಳವರೆಗೆ ಪಕ್ಷದ ಪರಮೋಚ್ಛ ನಾಯಕನಾಗಿ ಗುರುತಿಸಿಕೊಂಡಿದ್ದ ಮುಲಾಯಂ ಸಿಂಗ್ ಅವರು ಪ್ರಣಾಳಿಕೆ ಬಿಡುಗಡೆ ಸಂದರ್ಭ ಗೈರುಹಾಜರಾಗಿದ್ದುದು ಗಮನಾರ್ಹವಾಗಿತ್ತು.
‘ಕಾಮ್ ಬೋಲ್ತಾ ಹೈ ’ (ಕೆಲಸವೇ ಮಾತನಾಡುತ್ತದೆ) ಎಂಬ ಘೋಷವಾಕ್ಯದ 32 ಪುಟದ ಪ್ರಣಾಳಿಕೆ ಪುಸ್ತಕದಲ್ಲಿ ಮುಲಾಯಂ ಮತ್ತು ಅಖಿಲೇಶ್ ಇಬ್ಬರ ಫೋಟೋ ಕೂಡಾ ಇದೆ. ಆದರೆ ಪಕ್ಷದ ಮತ್ತೋರ್ವ ಪ್ರಭಾವೀ ಮುಖಂಡ, ಮುಲಾಯಂ ಸೋದರ ಶಿವಪಾಲ್ ಸಿಂಗ್ ಅವರ ಫೋಟೋ ಹಾಕಿಲ್ಲ.
ಲ್ಯಾಪ್‌ಟಾಪ್ ವಿತರಣೆ, ಕನ್ಯಾ ವಿದ್ಯಾ ದಾನ್, ಸಮಾಜವಾದಿ ಪೆನ್ಷನ್, ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಆರಂಭ, ಜನೇಶ್ವರ ಮಿಶ್ರಾ ಮಾದರಿ ಗ್ರಾಮಗಳ ಸ್ಥಾಪನೆ, ಅಸಹಾಯಕ ಮಹಿಳೆಯರಿಗೆ ಮತ್ತು ಪೊಲೀಸರ ನೆರವಿಗೆ ಹೆಲ್ಪ್‌ಲೈನ್ ಸುಧಾರಣೆ ಮುಂತಾದ ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಬಿಮಾ ಯೋಜನೆಯ ರೀತಿಯಲ್ಲೇ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ನೆರವಾಗಲು ‘ಸಮಾಜವಾದಿ ಕಿಸಾನ್ ಕೋಶ’ದ ಸ್ಥಾಪನೆ ಪ್ರಣಾಳಿಕೆಯಲ್ಲಿರುವ ಮತ್ತೊಂದು ಪ್ರಮುಖ ಅಂಶವಾಗಿದೆ.
ರೈತರ ನಿಧಿ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 24 ಗಂಟೆಗಳ ವಿದ್ಯುತ್ ಪೂರೈಕೆ, ಸಮಾಜವಾದಿ ಪೆನ್ಷನ್ ಯೋಜನೆಯಡಿ 1 ಕೋಟಿ ಜನರಿಗೆ ತಿಂಗಳಿಗೆ 1 ಸಾವಿರ ರೂ. ಪೆನ್ಷನ್, 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್, ಸಮಾಜವಾದಿ ಸ್ಮಾರ್ಟ್‌ಫೋನ್ ಯೋಜನೆಯಡಿ ಉಚಿತ ಸ್ಮಾರ್ಟ್‌ಫೋನ್, ಬಡ ಮಹಿಳೆಯರಿಗೆ ಉಚಿತ ಫ್ರೆಶರ್ ಕುಕ್ಕರ್, ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಲಿನ ಪುಡಿ ಮತ್ತು ತುಪ್ಪ, ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಟಿಕೆಟು ದರದಲ್ಲಿ ಶೇ.50ರಷ್ಟು ರಿಯಾಯ್ತಿ.
ಆಗ್ರಾ, ಕಾನ್‌ಪುರ, ವಾರಾಣಸಿ ಮತ್ತು ಮೀರತ್‌ಗೆ ಮೆಟ್ರೋ ವ್ಯವಸ್ಥೆಯ ವಿಸ್ತರಣೆ, ಸಮಾಜವಾದಿ ಪಕ್ಷ ಸ್ಮಾರ್ಟ್ ಹಳ್ಳಿಗಳು, ಪೂರ್ವಾಂಚಲ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ಮಾರ್ಗ ನಿರ್ಮಾಣ, 60 ವರ್ಷಕ್ಕಿಂತಲೂ ಮೊದಲು ಅಕಾಲಿಕ ಮರಣಕ್ಕೀಡಾದ ವಕೀಲರಿಗೆ 10 ಲಕ್ಷ ಪರಿಹಾರ, ಸಮಾಜವಾದಿ ಕ್ರೀಡಾ ಶಾಲೆಗಳ ಸ್ಥಾಪನೆ- ಇವು ಪ್ರಣಾಳಿಕೆಯ ಕೆಲವು ಪ್ರಮುಖ ಅಂಶಗಳು.
ಪ್ರಣಾಳಿಕೆ ಬಿಡುಗಡೆಗೊಳಿಸಿದ ಅಖಿಲೇಶ್, ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಒಂದು ಕ್ರಿಯಾಯೋಜನೆ ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚಿಸಿದರು. ರಾಜ್ಯದಲ್ಲಿ ಮುಂದಿನ ಸರಕಾರ ರಚಿಸಲು ಈ ಪ್ರಣಾಳಿಕೆ ಒಂದು ಸಂಕಲ್ಪ ವಾಗಿದ್ದು 403 ಸ್ಥಾನಗಳ ಪೈಕಿ ತಮ್ಮ ಪಕ್ಷ 300ರಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2012ರ ಚುನಾವಣೆಯಲ್ಲಿ ಎಸ್‌ಪಿ 224 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.







