ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಆಯ್ಕೆ
ಉಪಾಧ್ಯಕ್ಷರಾಗಿ ಮಿತ್ತಬೈಲ್ ಉಸ್ತಾದ್

ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್
ಮಲಪ್ಪುರಂ, ಜ.22: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂತನ ಅಧ್ಯಕ್ಷರಾಗಿ ಕಾಞಂಗಾಡ್ ಖಾಝಿಯಾಗಿರುವ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದ.ಕ. ಜಿಲ್ಲೆಯ ಖ್ಯಾತ ವಿದ್ವಾಂಸ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ಆಯ್ಕೆಯಾಗಿದ್ದಾರೆ. ‘ಸಮಸ್ತ’ ಉಪಾಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ರ ಅಧ್ಯಕ್ಷತೆಯಲ್ಲಿ ಚೇಳಾರಿಯ ‘ಸಮಸ್ತಾಲಯಂ’ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಕಾರ್ಯದರ್ಶಿಯಾಗಿ ಎಂ.ಟಿ.ಅಬ್ದುಲ್ಲ ಮುಸ್ಲಿಯಾರ್ ನೇಮಕಗೊಂಡಿದ್ದಾರೆ.
ಕುಮರಂಪುತ್ತೂರು ಎ.ಪಿ.ಮುಹಮ್ಮದ್ ಮುಸ್ಲಿಯಾರ್ರ ನಿಧನದಿಂದ ಅಧ್ಯಕ್ಷ ಸ್ಥಾನ ಹಾಗೂ ಕೋಟುಮಲ ಬಾಪು ಉಸ್ತಾದ್ರ ನಿಧನದಿಂದ ಕಾರ್ಯದರ್ಶಿ ಸ್ಥಾನ ತೆರವಾಗಿತ್ತು.
ಉಳಿದ ಪದಾಧಿಕಾರಿಗಳ ವಿವರ ಇಂತಿವೆ:
ಪ್ರಧಾನ ಕಾರ್ಯದರ್ಶಿಯಾಗಿ ಶೈಖುನಾ ಅಲಿಕುಟ್ಟಿ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಪಿ.ಕೆ.ಎಂ.ಸ್ವಾದಿಕ್ ಮುಸ್ಲಿಯಾರ್ ಹಾಗೂ ಕೊಯ್ಯೋಡ್ ಉಮರ್ ಮುಸ್ಲಿಯಾರ್ ಕಾರ್ಯದರ್ಶಿಯಾಗಿರುವರು.
ಮಿತ್ತಬೈಲ್ ಉಸ್ತಾದ್ರ ಪರಿಚಯ:
ಖಗೋಳ ಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಮಿತ್ತಬೈಲ್ ಉಸ್ತಾದ್ ಕಳೆದ ನಾಲ್ಕು ದಶಕಗಳಿಂದ ಮಿತ್ತಬೈಲ್ ಮಸೀದಿಯಲ್ಲಿ ಮುದರ್ರಿಸ್ರಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಧಾರ್ಮಿಕ ಪದವೀಧರ ಶಿಷ್ಯಂದಿರನ್ನು ಹೊಂದಿದ್ದಾರೆ. ಮೂಲತಃ ಲಕ್ಷದ್ವೀಪದವರಾಗಿರುವ ಮಿತ್ತಬೈಲ್ ಉಸ್ತಾದ್ ಆಧ್ಯಾತ್ಮಿಕವಾಗಿ ಕರಾವಳಿ ಭಾಗದ ಮುಸ್ಲಿಮ್ ಸಮುದಾಯದ ನಾಯಕತ್ವ ಸ್ಥಾನದಲ್ಲಿ ಗುರುತಿಸಿಕೊಂಡವರು.
ಕರ್ಮಶಾಸ್ತ್ರದಲ್ಲೂ ಅಪಾರ ಪಾಂಡಿತ್ಯ ಹೊಂದಿರುವ ಇವರು ಮಂಗಳೂರು ಖಾಝಿಯಾಗಿದ್ದ ಮರ್ಹೂಂ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ರ ಕಾಲದಲ್ಲಿ ಸಹ ಖಾಝಿಯಾಗಿ (ನಾಯಿಬ್ ಖಾಝಿ) ಸೇವೆಗೈದಿದ್ದರು. ಪ್ರಸ್ತುತ ದಕ್ಷಿಣ ಕರ್ನಾಟಕ ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿಯಾಗಿ, ಹಲವಾರು ಮೊಹಲ್ಲಾಗಳ ಗೌರವಾಧ್ಯಕ್ಷರಾಗಿ ಹಾಗೂ ವಿವಿಧ ಧಾರ್ಮಿಕ ಸಂಸ್ಥೆಗ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.







