ವಿವೇಕಾನಂದದಲ್ಲಿ ರಾಜ್ಯಮಟ್ಟದ ಭೌತವಿಜ್ಞಾನ ಕಾರ್ಯಕ್ರಮ

ಪುತ್ತೂರು, ಜ.22 : ಮೂಲವಿಜ್ಞಾನದ ಪ್ರಾಮುಖ್ಯತೆ ಹಾಗೂ ವಿಸ್ತಾರತೆಯ ಬಗೆಗೆ ಇತ್ತೀಚೆಗಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿಯೇ ಇಂಜಿನಿಯರಿಂಗ್‌ನಂತಹ ವಿಷಯಗಳಲ್ಲಿಯೂ ಮೂಲವಿಜ್ಞಾನದ ವಿಚಾರಗಳು ಒಳಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಮೂಲವಿಜ್ಞಾನವನ್ನು ಕಲಿಯುವವರು ತಾವು ಕಲಿಯುತ್ತಿರುವುದು ಪ್ರಪಂಚಕ್ಕೇ ಅನ್ವಯವಾದ ವಿಷಯ ಅನ್ನುವುದನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶರತ್ ಅನಂತಮೂರ್ತಿ ಹೇಳಿದರು.
ಅವರು ಶನಿವಾರ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಸಮಕಾಲೀನ ಭೌತಶಾಸ್ತ್ರ ವಿಷಯದ ಬಗೆಗೆ ಆಯೋಜಿಸಲಾದ ರಾಜ್ಯಮಟ್ಟದ ಪ್ರಬಂಧಮಂಡನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಇಂದು ಜ್ಞಾನ ಸಮಾಜವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮೂಲವಿಜ್ಞಾನದ ಬಗೆಗೆ ಹೆಚ್ಚಿನ ಕಾರ್ಯಾಗಾರಗಳು, ವಿಚಾರ ವಿಮರ್ಶೆಗಳು ಜಾರಿಯಲ್ಲಿರಬೇಕು. ಮೂಲಭೂತ ಕೆಲಸ ಕಾರ್ಯಗಳು ಹೆಚ್ಚು ಹೆಚ್ಚು ಚಾಲ್ತಿಯಲ್ಲಿರಬೇಕು. ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನೆಗಳು ಮೂಲವಿಜ್ಞಾನದ ಬಗೆಗೆ ಮತ್ತಷ್ಟು ಗಟ್ಟಿಯಾಗುವ ಅಗತ್ಯವಿದೆ. ಆಗ ಮಾತ್ರ ಜ್ಞಾನ ಸಮಾಜದ ಎಡೆಗಿನ ತುಡಿದ ಯಶಸ್ವಿಯಾಗಲು ಸಾಧ್ಯ ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ , ನಮ್ಮ ದೇಶದ ಬಹುಮುಖ್ಯ ವರ್ಗವಾದ ಕೃಷಿಕನನ್ನು ಒಳಗೊಳ್ಳಬಹುದಾದ ಕೃಷಿ ಭೌತಶಾಸ್ತ್ರದ ಬಗೆಗೆ ವಿಚಾರ ಮಂಡನೆಗಳಾಗಬೇಕು. ಆಗ ನಾವು ಮಾಡುವ ಕಾರ್ಯಗಳು ಸಮಾಜವನ್ನು ತಲಪುವುದಕ್ಕೆ ಸಾಧ್ಯ. ವಾತಾವರಣ ಬದಲಾವಣೆ, ಮಣ್ಣಿನ ಗುಣಾವಗುಣಗಳ ಬಗೆಗಿನ ಭೌತವಿಜ್ಞಾನದ ಅಗತ್ಯ ಇಂದಿನ ಸಮುದಾಯಕ್ಕಿದೆ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಮೂಲವಿಜ್ಞಾನದಲ್ಲಿ ಆಸಕ್ತಿ ಹೊಂದಿದವರಿಗೆ ವಿಸ್ತತವಾದ ಅವಕಾಶವಿದೆ. ನಮ್ಮ ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಯಾಕೆಂದರೆ ಅದಾಗಲೇ ಮೂಲವಿಜ್ಞಾನ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದು ನುಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವಪ್ರಸಾದ್ ಪ್ರಸ್ತಾವನೆಗೈದರು.
ಉಪನ್ಯಾಸಕ ದೀಕ್ಷಿತ್ ವಂದಿಸಿದರು. ಉಪನ್ಯಾಸಕಿ ಸ್ಮತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.







