ಉಡುಪಿ ಯಕ್ಷಗಾನ ಕೇಂದ್ರಕ್ಕೆ ಬಲ್ಲಾಳ ಪ್ರಶಸ್ತಿ

ಉಡುಪಿ, ಜ.22: ಅಂಬಲಪಾಡಿ ದೇವಳದ ಧರ್ಮದರ್ಶಿಗಳಾಗಿದ್ದ ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಶನಿವಾರ ರಾತ್ರಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ಕೇಂದ್ರಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಅಣ್ಣಾಜಿ ಬಲ್ಲಾಳ್ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಡಾ. ನಿ.ಬೀ ವಿಜಯಬಲ್ಲಾಳರು ಸ್ತುತ್ಯರ್ಹವಾದ ಕೆಲಸ ಮಾಡಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ಟರು ಮಾತನಾಡಿ, 45ಕ್ಕೂ ಅಧಿಕ ವರ್ಷಗಳಿಂದ ನಿರಂತರವಾಗಿ ಸಂಸ್ಥೆ ಕಲಾ ಸೇವೆ ಮಾಡುವಲ್ಲಿ ಡಾ.ಶಿವರಾಮ ಕಾರಂತ, ಕು.ಶಿ.ಹರಿದಾಸ ಭಟ್ ಹಾಗೂ ಎಲ್ಲಾ ಗುರುವೃಂದ ಮುಖ್ಯವಾಗಿ ಪ್ರಕೃತ ಪ್ರಾಂಶುಪಾಲರಾಗಿರುವ ಗುರು ಬನ್ನಂಜೆ ಸಂಜೀವ ಸುವರ್ಣರ ಕೃತುಶಕ್ತಿ ಕಾರಣವಾಗಿದೆ ಎಂದರು.
ಆರಂಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಗಳಾಗಿ ಭುವನ ಪ್ರಸಾದ್ ಹೆಗ್ಡೆ ಮತ್ತು ನಿರುಪಮಾ ಪಿ. ಶೆಟ್ಟಿ ಭಾಗವಹಿಸಿದ್ದರು.
ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ ಹಿರಿಯ ಸದಸ್ಯ ಡಾ. ಪಿ.ಗಣಪತಿ ಭಟ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದ್ದು, ಕೊನೆಯಲ್ಲಿ ಕೆ.ಜೆ. ಗಣೇಶ್ ವಂದಿಸಿದರು.







