ಈ ಬಾಲಕಿಗೆ ಅಲ್ಪ ದೇಹ ಅಲುಗಾಡಿದರೂ ಎಲುಬು ಮುರಿಯುವ ಭಯ !
.jpg)
ಕಾಸರಗೋಡು , ಜ.22 : ಕಾಸರಗೋಡು ಜಿಲ್ಲೆಯ ಒಂದು ಪ್ರದೇಶವನ್ನೇ ದುರಂತಕ್ಕೆ ತಳ್ಳಿದ ಎಂಡೋಸಲ್ಫಾನ್ ವಿಷಾಕಾರಿ ಇಂದಿಗೂ ಜನತೆಯನ್ನು ಕಾಡುತ್ತಿದೆ. ಎಂಡೋ ಸಲ್ಫಾನ್ ವಿಷ ಮಳೆಗೆ ತುತ್ತಾಗಿ ನೋವಿನಿಂದ ಒದ್ದಾಡುತ್ತಿರುವ ಚೆರ್ವತ್ತೂರು ಚೀಮೇನಿಯ 7ರ ಹರೆಯದ ಬಾಲಕಿಯೋರ್ವಳ ದುರಂತ ಜೀವನ ಮನಕಲಕುತ್ತಿದೆ.
ಚಿಮೇನಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ನಂದನ ಎಂಬ ಬಾಲಕಿಯ ದುಸ್ಥಿತಿ ಗೆ ಬೆಲೆ ಕೊಡುವವರು ಯಾರು ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ. ಬಾಲಕಿಗೆ ಅಲ್ಪ ದೇಹ ಅಲುಗಾಡಿದರೂ ಎಲುಬು ಮುರಿಯುವ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದು , ನೋವಿನ ಜೊತೆಗೆ ಕಣ್ಣೀರಿನೊಂದಿಗೆ ಈಕೆ ಬದುಕುತ್ತಿದ್ದಾಳೆ . ಎಲ್ಲಾ ಮಕ್ಕಳಂತೆ ಮುದ್ದಾಗಿ ನಲಿದಾಡಿ , ಆಟವಾಡಿ ಕಾಲ ಕಳೆಯಬೇಕಾದ ಬಾಲಕಿ ನೋವಿನಿಂದ ನರಳುತ್ತಿದ್ದಾಳೆ . ಎಲ್ಲಿಯಾದರೂ ಆಯತಪ್ಪಿ ಬಿದ್ದಲ್ಲಿ , ಯಾವುದೇ ವಸ್ತು ತಾಗಿದ್ದಲ್ಲಿ ಎಲುಬು ತುಂಡಾಗುತ್ತಿದೆ .
ಇದರಿಂದ ಶಾಲೆಗೆ ತೆರಳುವಾಗ ತಾಯಿ ಗಿರಿಜಾ ಜೊತೆ ತೆರಳುತ್ತಾರೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಯಾವುದೇ ಗಮನಾರ್ಹ ಬದಲಾವಣೆ ಕಂಡುಬರುತ್ತಿಲ್ಲ. ಈಗಾಗಲೇ 15 ಬಾರಿ ಈಕೆಗೆ ಎಲುಬು ಮುರಿದು ಚಿಕಿತ್ಸೆ ಪಡೆದಿದ್ದಾರೆ.
ಒಂದು ತಿಂಗಳ ಹಿಂದೆ ಶಾಲೆಯಿಂದ ಬಸ್ಸಿನಲ್ಲಿ ಬರುತ್ತಿದ್ದಾಗ ಸ್ವಲ್ಪ ತಾಗಿದ್ದರಿಂದ ಕಾಲಿನ ಎಲುಬು ತುಂಡಾಗಿ ಇದೀಗ ಚಿಕೆತ್ಸೆ ಪಡೆಯುತ್ತಿದ್ದಾಳೆ. ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದು , ಆದರೆ ನಡೆದಾಡಲು ಮತ್ತೂ ಒಂದೂವರೆ ತಿಂಗಳು ಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ .
ಇದು ಮಾತ್ರವಲ್ಲಿ ಇತರ ಶಾರೀರಿಕ ಅಸ್ವಸ್ಥತೆ ಬಾಲಕಿಯಲ್ಲಿದೆ. ಹುಟ್ಟಿನಿಂದಲೇ ಬಾಲಕಿಯಲ್ಲಿ ಶಾರೀರಿಕ ಅಸ್ವಸ್ಥತೆ ಕಂಡು ಬಂದಿತ್ತು. ಬಾಲಕಿಗೆ 4 ವರ್ಷವಾದಾಗ ಎಂಡೋ ಸಲ್ಫಾನ್ ಸಂತ್ರಸ್ಥ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿತ್ತು .
ಎಂಡೋ ಸಲ್ಫಾನ್ ಸಂತ್ರಸ್ಥ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡು ಈಕೆಗೆ ಧನಸಹಾಯ ಲಭಿಸುತ್ತಿದೆ . ಆದರೆ ಆಗಾಗ ಎಲುಬು ಹುಡಿಯಾಗುವ ಖಾಯಿಲೆಗೆ ಚಿಕೆತ್ಸೆ ಪಡೆಯಲು ಹಣವನ್ನು ಹೊಂದಿಸಬೇಕಾದ ಸ್ಥಿತಿ ಕುಟುಂಬಕ್ಕಿದೆ . ನಂದನಾಳ ತಂದೆ ವಿನು ಕೂಲಿ ಕಾರ್ಮಿಕರಾಗಿದ್ದು, ಇವರ ವರಮಾನ ಕುಟುಂಬಕ್ಕೆ ಏಕ ಆಶ್ರಯ. ಇವರ ಮನೆ ಹೊಂದಿರುವ ಸ್ಥಳಕ್ಕೆ ಇದುವರೆಗೂ ಹಕ್ಕುಪತ್ರ ಲಭಿಸಿಲ್ಲ .
ಎಂಡೋಸಲ್ಫಾನ್ ಸಂತ್ರಸ್ಥ ಪಟ್ಟಿಯಲ್ಲಿದ್ದರೂ ಈ ಕುಟುಂಬಕ್ಕೆ ಸೂಕ್ತ ಮನೆ , ಭೂಮಿ ಲಭಿಸಿಲ್ಲ. ಅಲ್ಪಸ್ವಲ್ಪ ಸಂತ್ರಸ್ಥರಿಗಿರುವ ಸಹಾಯಧನ ಬಿಟ್ಟರೆ ಬೇರೆ ಯಾವುದೇ ರೀತಿಯ ನೆರವು ಈ ಕುಟುಂಬಕ್ಕಿಲ್ಲ.







