ಜ28ರಂದು ಮೂಡುಬಿದಿರೆಯಲ್ಲಿ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರಧಾನ

ಮೂಡುಬಿದಿರೆ,ಜ.23 : ಸ್ವಾಮಿ ವಿವೇಕಾನಂದರ 154ನೇ ಜಯಂತಿಯ ಅಂಗವಾಗಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜ.28ರಂದು ಸಂಜೆ 5 ಗಂಟೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು ಸೇವಾ ಸಂಸ್ಥೆಯ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಲಿದ್ದಾರೆ. ಮೂಡುಬಿದಿರೆ ಶ್ರೀ ಜೈನಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 31 ಸಾಧಕರಿಗೆ ಈ ಸಂದರ್ಭದಲ್ಲಿ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಸುನಿಲ್ ಕುಮಾರ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ನಳಿನ್ ಕುಮಾರ್ ಕಟೀಲು, ಚಿಕ್ಕಮಗಳೂರು-ಉಡುಪಿ ಕ್ಷೇತ್ರಸ ಸಂಸದರು ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ತು ಸದಸ್ಯರು ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವರು ಕೆ.ಅಮರನಾಥ್ ಶೆಟ್ಟಿ, ಯು.ಪಿ.ಸಿ.ಎಲ್ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಕಿಶೋರ್ ಆಳ್ವಾ, ದ.ಕ. ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹಾಗೂ ಮೂಡುಬಿದಿರೆ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಮೊದಲು ಮಂಡ್ಯದ ಸಚಿನ್ ಮತ್ತು ತಂಡದವರಿಂದ ಲಂಕಾದಹನ ಹರಿಕಥೆ ಹಾಗೂ ಚೈತನ್ಯ ಕಲಾವಿದರು, ಬೈಲೂರು ತಂಡದವರಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳುವುದು ಎಂದು ಜಗನ್ನಾಥ ಅವರು ಹೇಳಿದರು.
ಸಮಿತಿಯ ಸಂಚಾಲಕ ದಿನೇಶ್ ಶೆಟ್ಟಿ ಕುಬೇವೂರು ಮತ್ತು ನರಸಿಂಹ ಮಡಿವಾಳ್ ನಿಡ್ಡೋಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.







