ದರ್ಮ ಚಿಂತನೆಯೊಂದಿಗೆ ಬರಪರಿಹಾರ ಕಾರ್ಯ ನಡೆಯಬೇಕು : ಯಡಿಯೂರಪ್ಪ
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ

ಪುತ್ತೂರು,ಜ.23: ರಾಜ್ಯದ ವಿವಿಧೆಡೆ ಬರದ ಛಾಯೆ ಈಗಲೇ ದಟ್ಟವಾಗುತ್ತಿದೆ. ನೀರಿನ ಸಮಸ್ಯೆಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಧರ್ಮ ಚಿಂತನೆಯೊಂದಿಗೆ ಇದಕ್ಕೆ ಪರಿಹಾರ ನೀಡುವ ದೃಷ್ಟಿಯಿಂದ ಕಾರ್ಯೊನ್ಮುಖರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಸೋಮವಾರ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ನೀರಿನ ಸಮಸ್ಯೆಯಿಂದ ಕೃಷಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಪ್ರವಾಸದ ಸಂದರ್ಭ ರಾಜ್ಯದ ಮೂಲೆ ಮೂಲೆಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದೇನೆ. ನೊಂದಿರುವ ಊರಿನ ಸ್ಥಿತಿಗತಿ ನೋಡುವಾಗ ಕಣ್ಣೀರು ಬರುತ್ತದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕು. ಧರ್ಮ ಚಿಂತನೆಯಿಂದ ಇದಕ್ಕೆ ಸೂಕ್ತ ಪರಿಹಾರ ನೀಡುವ ಅಗತ್ಯವಿದೆ ಎಂದರು.
ಲೌಕಿಕ ಜೀವನದ ಜತೆಗೆ ಆಧ್ಯಾತ್ಮಿಕ, ಧಾರ್ಮಿಕತೆ, ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಜೀವನ ನಮ್ಮದಾಗಲು ಸಾಧ್ಯ. ಜೀವನ ನಿಂತಿರುವುದೇ ದೇಶದ ಬಗೆಗಿನ ನಂಬಿಕೆಯಿಂದ. ಕಷ್ಟ ಕಾರ್ಪಣ್ಯ ಕೊನೆಯಾಗಬೇಕಾದರೆ ದೇವಾಲಯ, ಧರ್ಮದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಸಂರಕ್ಷಿಸುವ ಕೆಲಸ ಆಗಬೇಕು. ಇದೇ ಕಾರಣಕ್ಕೆ ನಾಡಿನ ಯಾವುದೇ ಮೂಲೆಯಿಂದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮುಂದಾದಾಗ ಕುಲ, ಗೋತ್ರ, ಜಾತಿ ನೋಡದೇ ಅನುದಾನ ಮಂಜೂರು ಮಾಡಿಸಿದ್ದೇನೆ. ಇದನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನ ಶಕ್ತಿಯನ್ನು ಹಿರಿಯರು ಒಂದು ಕಡೆ ಪ್ರತಿಷ್ಠೆ ಮಾಡಿದ್ದಾರೆ. ಅಲ್ಲಿ ಉರಿಸಿಟ್ಟ ಅಗ್ನಿಯನ್ನು ಆರಲು ಬಿಡದೇ, ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಬ್ರಹ್ಮಕಲಶದ ಮೂಲಕ ಆ ಕಾರ್ಯವನ್ನು ಮಾಡಿದ್ದೇವೆ. ಧಾರ್ಮಿಕ ಕೆಲಸಕ್ಕಾಗಿ ಯಡಿಯೂರಪ್ಪ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಇಂತಹ ಮಹತ್ ಕಾರ್ಯಕ್ಕೆ ಅನುದಾನ ನೀಡುವಂತೆ ಶ್ರೀ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ದೇವಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶೋಭಾ ಕರಂದ್ಲಾಜೆ ಮಾತನಾಡಿ, ಜನರೆಲ್ಲಾ ಒಗ್ಗಟ್ಟಾಗಿ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ. ಈ ಹಿನ್ನೆಲೆಯಲ್ಲಿ ಊರವರೆಲ್ಲಾ ಅದೇಷ್ಟೋ ದಿನಗಳಿಂದ ಮದ್ಯಪಾನ, ಮಾಂಸಾಹಾರ, ತಂಬಾಕು ಬಿಟ್ಟು ವ್ರತಾಚರಣೆಯಲ್ಲಿ ಕೆಲಸ ಮಾಡಿದ್ದೀರಿ. ಇದರ ಉದ್ದೇಶ ನಮ್ಮ ಮುಂದಿನ ಪೀಳಿಗೆ ಹಾಗೂ ನಾವು ಉತ್ತಮ ಜೀವನ ನಡೆಸಬೇಕು ಎನ್ನುವುದು. ಇದೇ ಉದ್ದೇಶದಿಂದ ಮುಂದೆಯೂ ಮದ್ಯಪಾನ, ತಂಬಾಕು, ಧೂಮಪಾನ ಮಾಡುವುದನ್ನು ಕಡಿಮೆ ಮಾಡಬೇಕು. ಇಂತಹ ಪ್ರತಿಜ್ಞೆಯನ್ನು ಇಂದೇ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ದೃಷ್ಟಿಯಿಂದ ದೇವಸ್ಥಾನ ಕೇಂದ್ರಿತ ಊರು ನಿರ್ಮಾಣವಾಗಬೇಕು. ನಮ್ಮ ಜೀವನದ ಸುಧಾರಣೆಗಾಗಿ, ಮಕ್ಕಳ ಒಳಿತಿಗಾಗಿ ವಾರಕ್ಕೆ ಒಂದು ಬಾರಿಯಾದರೂ ದೇವಸ್ಥಾನಕ್ಕೆ ಹೋಗಿ- ಬರುವ ತೀರ್ಮಾನ ಕೈಗೊಳ್ಳಬೇಕು. ಇದರಿಂದ ಊರಿಗೂ ಕ್ಷೇಮ ಸಿಗಲಿದೆ ಎಂದರು.
ಯಡಿಯೂರಪ್ಪ ಹಿಂದಿನ ಸಲ ಚಾರ್ವಾಕ ದೇವಸ್ಥಾನದ ವಿವಿಧ ಕಾಮಗಾರಿಗಾಗಿ 60 ಲಕ್ಷ ರೂ. ಅನುದಾನ ನೀಡಿದ್ದರು. ಸಾರಾಯಿ ನಿಷೇಧಿಸಿದ ಕೀರ್ತಿಯೂ ಯಡಿಯೂರಪ್ಪ ಅವರಿಗೇ ಸಲ್ಲುತ್ತದೆ. ರಾಜ್ಯದ ವಿವಿಧ ದೇವಾಲಯಗಳಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವ ಹುದ್ದೆಗೆ ಬರುವಂತಾಗಲಿ ಎಂದು ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹಿಂದಿನ ವರ್ಷ 192 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಬಾರಿ 23 ದೇವಾಲಯಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಜನರ ಧಾರ್ಮಿಕ ನಂಬಿಕೆಗೆ ಯಡಿಯೂರಪ್ಪ ಇನ್ನಷ್ಟು ಬಲ ತುಂಬುವ ಕೆಲಸ ಮಾಡಿದ್ದಾರೆ. ತ್ಯಾಗ, ಸಮರ್ಪಣೆಯೇ ನಿಜವಾದ ಪೂಜೆ. ಕಳೆದ ಎರಡು ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡ ಚಾರ್ವಾಕ ಗ್ರಾಮಸ್ಥರು, ದೇವರ ಪೂಜೆಯನ್ನು ನಿಜವಾದ ಅರ್ಥದಲ್ಲಿ ಪೂರೈಸಿದ್ದೀರಿ ಎಂದರು.
ಶಾಸಕ ಅಂಗಾರಿ ಶುಭಹಾರೈಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜೋಡುದೈವಗಳ ಆಡಳಿತದಾರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಕುಶಾಲಪ್ಪ ಗೌಡ, ಕೋಶಾಧಿಕಾರಿ ಕೇಶವ ನಾಯಕ್ ಅಯೋಧ್ಯಾನಗರ, ಆಡಳಿತ ಪಂಗಡ ಅಧ್ಯಕ್ಷ ತಿಮ್ಮಪ್ಪ ಗೌಡ ಮೀಜೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಡಾ.ಪ್ರಸಾದ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗೌಡ ಇಡ್ಯಡ್ಕ ವಂದಿಸಿದರು.







