ಮೂಡುಬಿದಿರೆ ವಲಯ ಕಥೋಲಿಕ್ ಸಭಾ ಬೆಳ್ಳಿಹಬ್ಬ ಉದ್ಘಾಟನೆ
ಗುಣಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ: ಅನಿಲ್ ಫೆರ್ಮಾಯ್
.jpg)
ಮೂಡುಬಿದಿರೆ,ಜ.23: ನಾಯಕರೆನಿಸಿದವರು ಗುಣಾತ್ಮಕ ಚಿಂತನೆಯನ್ನಿಟ್ಟುಕೊಂಡು ಎಲ್ಲರನ್ನೂ ಜೊತೆಗಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಕಥೋಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯಿ ಅವರು ಹೇಳಿದರು.
ಅವರು ರವಿವಾರ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ನಡೆದ ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಬೆಳ್ಳಿಹಬ್ಬ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿವಿಧ ಸಂಘಟನೆಗಳು ಮತ್ತು ಎಲ್ಲಾ ವರ್ಗಗಳ ಜನರು ಜೊತೆಯಾಗಿ ಕಾರ್ಯನಿರ್ವಹಿಸಿದರೆ ಪ್ರಗತಿ ಸಾಧಿಸುವುದು ಸಾಧ್ಯ ಎಂದ ಅವರು, ಕ್ರೈಸ್ತ ಸಂಘಟನೆಗಳು ಸಮಾಜದ ಮುಖ್ಯವಾಹಿನಿಯ ಸಂಘಟನೆಗಳಾಗಿಯೂ ಮೂಡಿಬರಬೇಕೆಂಬ ಆಶಯ ವ್ಯಕ್ತಪಡಿಸಿದರು.
ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂ ಸ್ವಾಮಿ ಪಾವ್ಲ್ ಸಿಕ್ವೇರಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೇವೆ, ತ್ಯಾಗ ಮತ್ತು ಒಗ್ಗಟ್ಟು ಎಂಬ ಮೂಲಮಂತ್ರದ ಮೂಲಕ ಕಥೋಲಿಕ್ ಸಭಾ ಸಂಘಟನೆಯಿಂದ ಸಮುದಾಯದ ಎಲ್ಲಾ ವರ್ಗಗಳ ಜನರ ಒಳಿತಾಗುತ್ತಿರುವುದು ಶ್ಲಾಘನೀಯ ಎಂದರು.
ಕಥೋಲಿಕ್ ಸಭಾದ ಹಿರಿಯ ನಾಯಕರಾದ ಕಾಶ್ಮೀರ್ ಮಿನೇಜಸ್, ಎಲ್.ಜೆ. ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಥೋಲಿಕ್ ಸಭಾದ ಆರಂಭಿಕ ದಿನಗಳನ್ನು ನೆನಪಿಸಿದರು. ಕಥೋಲಿಕ್ ಸಭಾ ವಲಯಾಧ್ಯಕ್ಷ ಮೆಲ್ವಿನ್ ಡಿಕೋಸ್ತಾ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿಹಬ್ಬ ವರ್ಷದ ಸಂಚಾಲಕ ಜೆರಾಲ್ಡ್ ಡಿಕೋಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಬೆಳ್ಳಿಹಬ್ಬದ ಪ್ರಯುಕ್ತ ರೂಪಿಸಿರುವ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು.
ಮೂಡುಬಿದಿರೆ ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಸೆರಾವೋ ಮತ್ತು ಜಾತ್ಯಾತೀತ ಜನತಾದಳದ ಮೂಲ್ಕಿ ಮೂಡುಬಿದಿರೆ ವಿದಾನಸಭಾ ಕ್ಷೇತ್ರಾಧ್ಯಕ್ಷರಾಗಿ ಆಯ್ಕೆಯಾದ ಅಶ್ವಿನ್ ಜೊಸ್ಸಿ ಪಿರೇರಾ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಸ್ಥಾಪಕರ ದಿನಾಚರಣೆಯಂಗವಾಗಿ ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಸ್ಥಾಪಕಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಘಟಕಗಳ ಸ್ಥಾಪಕಾಧ್ಯಕ್ಷರುಗಳು ಮತ್ತು ವಲಯಾಧ್ಯಕ್ಷರುಗಳಾಗಿ ಹಾಗೂ ಪ್ರಾಂತೀಯ, ಕೇಂದ್ರ ಸಮಿತಿಯಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಕಥೋಲಿಕ್ ಸಭಾದ ಪ್ರಮುಖರಾದ ಆ್ಯಂಡ್ರೂ ನೊರೊನ್ಹಾ, ವಲೇರಿಯನ್ ಮೊರಾಸ್, ಸೈಮನ್ ಮಸ್ಕರೇನ್ಹಸ್, ಆ್ಯಂಡ್ರೂ ಡಿಸೋಜಾಮ ಆಲ್ವಿನ್ ಮಿನೇಜಸ್, ಲೀನಾ ಪಿಂಟೊ, ಜೋನ್ ಮೆಂಡಿಸ್, ನೋರ್ಬರ್ಟ್ ಮಾರ್ಟಿಸ್, ಜೊಸ್ಸಿ ಮಿನೇಜಸ್, ಸಾವೆರಪುರ ಚರ್ಚ್‌ನ ಧರ್ಮಗುರುಗಳಾದ ವಂ ರಾಕೇಶ್ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.
ಲೋಯ್ಡ ರೇಗೊ ತಾಕೊಡೆ ಕಾರ್ಯಕ್ರಮ ನಿರೂಪಿಸಿದರು. ಹೆರಾಲ್ಡ್ ರೇಗೊ ಸಮ್ಮಾನಿತರ ವಿವರ ವಾಚಿಸಿದರು.







