ಪಡುಬಿದ್ರಿ : ಕಾಣೆಯಾದ ವ್ಯಕ್ತಿ ಕಡಲತಡಿಯಲ್ಲಿ ಶವವಾಗಿ ಪತ್ತೆ
ಪಡುಬಿದ್ರಿ,ಜ.23: ನಾಪತ್ತೆಯಾಗಿದ್ದ ಯುವಕನ ಶವ ಸೋಮವಾರ ಮುಂಜಾನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಹಾಸನ ಮೂಲದ ಕೋಡಿಕಲ್ ನಿವಾಸಿ ರಾಜೇಶ್ (21) ಶವವಾಗಿ ಪತ್ತೆಯಾಗಿದ್ದಾನೆ. ಸುಮಾರು 5 ವರ್ಷದ ಹಿಂದೆ ವಿದ್ಯಾಭ್ಯಾಸದ ನಿಮಿತ್ತ ಕೋಡಿಕಲ್‌ನ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ ರಾಜೇಶ್ ಕಳೆದ 5 ತಿಂಗಳಿನಿಂದ ಕೋಡಿಕಲ್‌ನ ಕಂಪ್ಯೂಟರ್ ಮತ್ತು ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜನವರಿ 16ರ ಬೆಳಿಗ್ಗೆ ಕೆಲಸಕ್ಕೆಂದು ಮನೆಯಿದ್ದ ತೆರಳಿದ್ದ ಆತ ಸಂಜೆ ಮನೆಗೆ ಹಿಂತಿರುಗದ ಕಾರಣ ಮನೆಯವರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.
ಶವ ಪತ್ತೆ: ಸೋಮವಾರ ಮುಂಜಾನೆ ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಕಡಲಕಿನಾರೆಯಲ್ಲಿ ದೈನಂದಿನ ಕಾಯಕಕ್ಕೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ಕಡಲತಡಿಯಲ್ಲಿದ್ದ ಅಪರಿಚಿತ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಶವವನ್ನು ಪಡುಬಿದ್ರಿ ಶವಾಗಾರಕ್ಕೆ ರವಾನಿಸಿ ಗುರುತು ಪತ್ತೆಗಾಗಿ ಉಳಿದ ಠಾಣೆಗಾಗಿ ಮಾಹಿತಿ ರವಾನಿಸಿದ್ದಾರೆ. ಉರ್ವ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ರಾಜೇಶ್‌ನ ಸಂಬಂಧಿಕರನ್ನು ಪಡುಬಿದ್ರಿ ಬರಲು ತಿಳಿಸಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಶವದ ಮೇಲಿದ್ದ ಬಟ್ಟೆಯ ಮೂಲಕ ಶವ ರಾಜೇಶನದ್ದೇ ಎಂದು ಗುರುತು ಹಿಡಿಯಲಾಗಿದೆ. ರಾಜೇಶ ಜೀವನದಲ್ಲಿ ಜಿಗುಪ್ಸೆಗೊಂಡು, ಮನನೊಂದು ಎಲ್ಲಿಯೋ ಸಮುದ್ರದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.







