ಭೋಪಾಲ್ ನಬರ್ಕತುಲ್ಲಾ ವಿವಿ ವಿದ್ಯಾರ್ಥಿ ಈಗ ರಾಷ್ಟ್ರಾಧ್ಯಕ್ಷ!

ಹೊಸದಿಲ್ಲಿ, ಜ.24: ಸೊಮಾಲಿಯಾದ ಅಧ್ಯಕ್ಷರಾಗಿರುವ ಹಸನ್ ಶೇಖ್ ಮುಹಮ್ಮದ್ ಅವರು ಈಗ ಬರ್ಕತುಲ್ಲಾ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುವ ಹಿಂದಿನ ಭೋಪಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರೆಂದು ತಿಳಿದು ಬಂದಿದೆ.
ಈ ವಿಶ್ವವಿದ್ಯಾಲಯದಿಂದ 1988ರಲ್ಲಿ ತಮ್ಮ ಎಂ.ಟೆಕ್ ಪದವಿ ಪಡೆದ ಸುಮಾರು 27 ವರ್ಷಗಳ ನಂತರ ಅವರು 2015ರಲ್ಲಿ ಭಾರತ ಸರಕಾರಕ್ಕೆ ಪತ್ರವೊಂದನ್ನು ಬರೆದು ತಮ್ಮ ಪದವಿ ಪ್ರಮಾಣ ಪತ್ರ ಒದಗಿಸುವಂತೆ ಕೋರಿದ್ದರು. ವಿಶ್ವವಿದ್ಯಾನಿಲಯ ಕೂಡ ತನ್ನ ಹಳೆ ವಿದ್ಯಾರ್ಥಿಯ ಕೋರಿಕೆಯನ್ನು ಮನ್ನಿಸಿ ಅವರಿಗೆಂದೇ ವಿಶೇಷ ಘಟಿಕೋತ್ಸವವನ್ನೂ ಆಯೋಜಿಸಿತ್ತು.
ಸೊಮಾಲಿಯಾ ಅಧ್ಯಕ್ಷ ಮುಹಮ್ಮದ್ ಅವರಂತೆಯೇ ಉನ್ನತ ಸ್ಥಾನದಲ್ಲಿರುವ ಇಲ್ಲಿನ ವಿಶ್ವವಿದ್ಯಾನಿಲಯಗಳ ವಿದೇಶಿ ಹಳೆ ವಿದ್ಯಾರ್ಥಿಗಳೊಂದಿಗೆ ಸೌಹಾರ್ದ ಸಂಬಂಧ ಬೆಳೆಸಲು ಭಾರತ ಉತ್ಸುಕವಾಗಿದೆ.
ವಿದೇಶಿ ವಿದ್ಯಾರ್ಥಿಗಳಿಗಾಗಿ ಭಾರತದಲ್ಲಿ ಹಲವು ಸ್ಕಾಲರ್ ಶಿಪ್ ಯೋಜನೆಗಳಿದ್ದರೂ ಹೀಗೆ ಇಲ್ಲಿ ಪದವಿ ಪಡೆದು ತಮ್ಮ ಸ್ವದೇಶಗಳಿಗೆ ಹಿಂದಿರುಗಿದ ವಿದ್ಯಾರ್ಥಿಗಳ ಬಗ್ಗೆ ಸರಕಾರ ಹೆಚ್ಚಿನ ಗಮನ ಹರಿಸಿಲ್ಲ. ಇದೀಗ ನರೇಂದ್ರ ಮೋದಿ ಸರಕಾರ ಇಂತಹ ವಿದೇಶಿ ಹಳೆ ವಿದ್ಯಾರ್ಥಿಗಳೊಂದಿಗೆ ಮತ್ತೆ ಬೆಸುಗೆ ಏರ್ಪಡಿಸಲು ಪ್ರಯತ್ನಿಸುತ್ತಿದೆ.
2015-16ರಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ 3,339 ಸ್ಕಾಲರ್ ಶಿಪ್ ಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಆಯುಷ್ ಸಚಿವಾಲಯ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಒದಗಿಸಿದೆ. ಇವುಗಳಲ್ಲಿ ಐಸಿಸಿಆರ್ ಒಟ್ಟು 946 ಸ್ಕಾಲರ್ ಶಿಪ್ ಗಳನ್ನು ಒದಗಿಸಿದೆ. ಪ್ರಸಕ್ತ ಭಾರತದಲ್ಲಿ ಸ್ಕಾಲರ್ ಶಿಪ್ ಪಡೆದು ಶಿಕ್ಷಣ ಪಡೆಯುತ್ತಿರುವ 6,518 ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಸುಮಾರು 120 ದೇಶಗಳ ಈ ವಿದ್ಯಾರ್ಥಿಗಳು 18 ರಾಜ್ಯಗಳ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಒಟ್ಟು ಸ್ಕಾಲರ್ ಶಿಪ್ ಗಳಲ್ಲಿ 1000 ಸ್ಕಾಲರ್ ಶಿಪ್ ಗಳು ಅಫ್ಗಾನಿಸ್ತಾನದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಮೊಂಗೋಲಿಯ, ಮಾಲ್ದೀವ್ಸ್ ಹಾಗೂ ಆಫ್ರಿಕನ್ ದೇಶದ ವಿದ್ಯಾರ್ಥಿಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.







