ರಾಜೀವ್ ಗಾಂಧಿ ಸರಕಾರದಲ್ಲಿ ಪಾಕ್ ವಿರುದ್ಧ ಸಜ್ಜಾಗಿತ್ತು ಹೈಡ್ರೋಜನ್ ಬಾಂಬ್ !

ಹೊಸದಿಲ್ಲಿ, ಜ.24: ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಪ್ರತಿಯಾಗಿ ಹೈಡ್ರೋಜನ್ ಬಾಂಬ್ ಪರೀಕ್ಷಿಸಲು 1985ರಲ್ಲಿ ತಯಾರಿ ನಡೆಸಲಾಗಿತ್ತು ಎಂದು ಇತ್ತೀಚೆಗೆ ಅಮೆರಿಕಾದಲ್ಲಿ ಬಿಡುಗಡೆ ಮಾಡಲಾದ ಕೆಲ ದಾಖಲೆಗಳು ಬಹಿರಂಗ ಪಡಿಸಿವೆ.
ರಾಜೀವ್ ಗಾಂಧಿ ಸರಕಾರದ ಅವಧಿಯಲ್ಲಿ ತಯಾರಿಸಲಾದ ಹೈಡ್ರೋಜನ್ ಬಾಂಬ್ ಭಾರತವು ಅದಕ್ಕಿಂತ 11 ವರ್ಷಗಳ ಹಿಂದೆ, ಇಂದಿರಾ ಗಾಂಧಿಯ ಅವಧಿಯಲ್ಲಿ ಪರೀಕ್ಷಿಸಿದ ಅಣ್ವಸ್ತ್ರಗಳಿಗಿಂತಲೂ ಪ್ರಬಲವಾಗಿತ್ತು. ಆ ಸಮಯದಲ್ಲಿ ಭಾರತವು ಅಣ್ವಸ್ತ್ರ ತಂತ್ರಜ್ಞಾನದಲ್ಲಿ ಪಾಕಿಸ್ತಾನಕ್ಕಿಂತ ಬಹಳ ಮುಂದಿತ್ತು ಎಂದೂ ಸಿಐಎ ದಾಖಲೆಗಳು ತಿಳಿಸಿವೆ. ಆರಂಭದಲ್ಲಿ ರಾಜೀವ್ ಗಾಂಧಿ ಅಣ್ವಸ್ತ್ರ ಯೋಜನೆಯಲ್ಲಿ ಅಷ್ಟೊಂದು ಆಸಕ್ತಿ ವಹಿಸಿಲ್ಲವಾದರೂ ಈ ನಿಟ್ಟಿನಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಗಮನಿಸಿ ಅವರು ಹೈಡ್ರೋಜನ್ ಬಾಂಬ್ ತಯಾರಿಗೆ ಅನುಮತಿಸಿದ್ದರೆಂದು ಸಿಐಎ ವರದಿ ತಿಳಿಸಿದೆ.
ಮುಂಬೈಯ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರಿನ 36 ವಿಜ್ಞಾನಿಗಳ ತಂಡ ಈ ಬಾಂಬನ್ನು ತಯಾರಿಸಿತ್ತು ಹಾಗೂ ಭಾರತ ಆ ಸಮಯದಲ್ಲಿ ಪ್ಲುಟೋನಿಯಂ ಸಂಗ್ರಹದಲ್ಲೂ ತೊಡಗಿತ್ತು ಎಂದು ಸಿಐಎ ದಾಖಲೆಗಳು ಹೇಳಿದೆ.
ನೆರೆಯ ರಾಷ್ಟ್ರಗಳ ನಡುವಣ ಈ ಪೈಪೋಟಿಯಿಂದ ಕಳವಳಗೊಂಡ ಅಂದಿನ ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಎರಡು ರಾಷ್ಟ್ರಗಳ ನಡುವೆ ಸಂಧಾನ ವೇರ್ಪಡಿಸಲು ಅಧಿಕಾರಿಯೊಬ್ಬರನ್ನೂ ಕಳುಹಿಸಿಕೊಟ್ಟಿದ್ದರು.
1980ರ ದಶಕದಲ್ಲಿ ಭಾರತದ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಸಿಐಎ ಇತ್ತೀಚೆಗೆ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ1.2 ಕೋಟಿ ಪುಟಗಳನ್ನೊಳಗೊಂಡ 9.3 ಲಕ್ಷ ದಾಖಲೆಗಳಿಂದ ತಿಳಿದು ಬಂದಿದೆ.
ಭಾರತದ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳಿಂದಾಗಿ ದಿಲ್ಲಿಯ ಅಣ್ವಸ್ತ್ರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಬಹಳ ಕಷ್ಟಕರವಾಗಿತ್ತು ಎಂದು ಒಂದು ದಾಖಲೆ ಹೇಳಿಕೊಂಡಿದೆ.







